ಕಡಬ: ಕುಡಿದ ಮತ್ತಿನಲ್ಲಿ ಕಡಬ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೋರ್ವರು ಹೊಸಮಠ ಹೊಳೆಗೆ ಹಾರಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅವರನ್ನು ಅಲ್ಲಿದ್ದ ಸಾರ್ವಜನಿಕರು ನೀರಿನಿಂದ ಮೇಲಕ್ಕೆತ್ತಿದ ಘಟನೆ ಸೆ.30ರಂದು ಸಂಜೆ ನಡೆದಿದೆ.

ಕಡಬ ಕೆಂಚಭಟ್ರೆ ಸಮೀಪ ಕಛೇರಿ ಹೊಂದಿರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿ ತಮಿಳುನಾಡು ಮೂಲದ ರವಿಚಂದ್ರನ್ 39ವ. ಎಂಬವರು ಹೊಳೆಗೆ ಹಾರಿದವರು, ಸಂಜೆಯ ವೇಳೆಗೆ ತನ್ನ ಬೈಕಿನಲ್ಲಿ ಬಂದ ರವಿಚಂದ್ರ ಅವರು ಬಿಯರ್ ಕುಡಿದು ಹೊಳೆಗೆ ಹಾರಿದರೆನ್ನಲಾಗಿದೆ, ಇದನ್ನು ಗಮನಿಸಿದ ಅಲ್ಲಿದ್ದ ಸಾರ್ವಜನಿಕರು ಹಾಗೂ ಇಬ್ಬರು ಲೈನ್ ಮ್ಯಾನ್ ಗಳು ಕೊಚ್ಚಿಹೋಗುತ್ತಿದ್ದ ರವಿಚಂದ್ರ ಅವರನ್ನು ರಕ್ಷಣೆ ಮಾಡಿದ್ದಾರೆ.


ಸ್ಥಳಕ್ಕೆ ಆಗಮಿಸಿದ ಕಡಬ ಎಸ್.ಐ.ರುಕ್ಮನಾಯ್ಕ್, ಎ.ಎಸ್.ಐ. ಸುರೇಶ್, ಸಿಬ್ಬಂದಿಗಳಾದ ಭವಿತ್ ರೈ, ಕನಕರಾಜ್ ಅವರು ವಿಜ್ಞಾನಿಯನ್ನು ಹರಸಾಹಸಪಟ್ಟು ನೀರಿನಿಂದ ಮೇಲೆಕ್ಕೆತ್ತಿದ್ದಾರೆ, ಬಳಿಕ ಪಿಕಪ್ ಮೂಲಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಲ ಸಮಯಗಳ ಹಿಂದೆ ಕಡಬಕ್ಕೆ ಆಗಮಿಸಿದ ರವಿಚಂದ್ರ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ ರಬ್ಬರ್ ಸಂಶೋಧನಾ ಕೇಂದ್ರದ ವಸತಿಗೃಹದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹೊಳೆಗೆ ಹಾರಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
