ಯುಎಇಯಲ್ಲಿ ಬಹಳಷ್ಟು ಕಷ್ಟದಲ್ಲಿ ಸಿಲುಕಿರುವ ಬಡ ಮತ್ತು ಮಧ್ಯಮ ವರ್ಗದ ಹಿರಿಯರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಹತ್ತು ಹಲವು ಸಮಸ್ಯೆಯಲ್ಲಿರುವ ಸುಮಾರು 187 ತುರ್ತು ಪ್ರಯಾಣಿಕರನ್ನು ಹೊತ್ತುಕೊಂಡು ಎಂ.ಫ್ರೆಂಡ್ಸ್ ಮಂಗಳೂರು ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್’ನ “ಫ್ಲೈ ದುಬೈ” ವಿಮಾನವು ಜೂನ್ 23ರಂದು ಮಂಗಳವಾರ ಸಂಜೆ 07.10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ.
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ಫ್ಲೈ ದುಬೈ FZ 4617 ವಿಮಾನವು ಸಂಜೆ 07.10ಕ್ಕೆ ಮಂಗಳೂರು ತಲುಪುವುದು. ಫ್ಲೈ ದುಬೈ ಹೆಸರಿನ ವಿಮಾನವು ಪ್ರಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಚಾರ್ಟರ್ಡ್ ವಿಮಾನ ಪ್ರಯಾಣಕ್ಕಾಗಿ ಬಾಹ್ಯ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತದ ಜೊತೆಗೆ ಸಂಪರ್ಕ ಸಾಧಿಸಲು ಸಹಕರಿಸಿದ ಕರ್ನಾಟಕ ಸರಕಾರದ ಎನ್ನಾರೈ ಸೆಲ್ ಮಾಜಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಮಂಗಳೂರು ಶಾಸಕರು, ಮಾಜಿ ಸಚಿವರಾದ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಪಿ. ರೂಪೇಶ್, ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರ ರಾಜ್ಯ ನೋಡಲ್ ಅಧಿಕಾರಿ ಮೀನಾ ನಾಗರಾಜ್, ಜಿಲ್ಲಾ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಮಂಗಳೂರು ವಿಮಾನ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ವಿ.ವಿ. ರಾವ್ ಅವರಿಗೆ ಎಂ.ಫ್ರೆಂಡ್ಸ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ಅಭಿನಂದನೆಯನ್ನು ಸಲ್ಲಿಸುತ್ತದೆ. ಚಾರ್ಟರ್ಡ್ ವಿಮಾನ ಪ್ರಯಾಣಕ್ಕಾಗಿ ಶ್ರಮ ವಹಿಸಿದ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರು ಹಾಗೂ ಎಂ.ಫ್ರೆಂಡ್ಸ್ ಟ್ರಸ್ಟಿ ಅಶ್ರಫ್ ಅಬ್ಬಾಸ್ ಕುಂಜತ್ತೂರು, ಎಂ.ಫ್ರೆಂಡ್ಸ್ ಎನ್ನಾರೈ ಪ್ರಮುಖರಾದ ಹನೀಫ್ ಪುತ್ತೂರು, ಎಂ.ಫ್ರೆಂಡ್ಸ್ ಪ್ರದಾನ ಕಾರ್ಯದರ್ಶಿ ರಶೀದ್ ವಿಟ್ಲ ಅವರು ಕೃತಜ್ಞಾರ್ಹರು ಎಂದು ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು ತಿಳಿಸಿದ್ದಾರೆ.