ಕೊರೊನ ಆತಂಕದ ನಡುವೆ ಮಳೆಗಾಲ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಚಂಡಮಾರುತಗಳು ಕಡಲತಡಿಯಲ್ಲಿ ತಮ್ಮ ಆರ್ಭಟ ತೋರಿಸುತ್ತಿದೆ. ಜಿಲ್ಲಾಡಳಿತದ ನಿರ್ಲಕ್ಷದಿಂದ ಒಂದು ಸಾವಿರ ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಇನ್ನು ಈ ಚಂಡ ಮಾರುತ ಮತ್ತು ಮಳೆಗಾಲದಿಂದ ತಮ್ಮ ಜೀವ ಮತ್ತು ಸೂರನ್ನು ರಕ್ಷಣೆ ಮಾಡಿಕೊಳ್ಳಲು ತಾವೇ ಮುಂದಾಗಿದ್ದಾರೆ.
ಚಂಡ ಮಾರುತ ಮತ್ತು ಮಳೆಗಾಲದಲ್ಲಿ ಕಡಲ್ಕೊರೆತ..!
ತಮ್ಮ ರಕ್ಷಣೆಗೆ ತಾವೇ ಮುಂದಾದ ಕಡಲ ಮಕ್ಕಳು..!
ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಸಾಲು ಸಾಲು ಎರಡೆರಡು ಚಂಡ ಮಾರುತಗಳು ಬಂದಿವೆ. ಇನ್ನು ಮಳೆಗಾಲ ಆರಂಭದ ಹಂತದಲ್ಲಿದೆ. ಈ ಮದ್ಯೆ ಮಂಗಳೂರಿನ ಹೊರವಲಯದಲ್ಲಿರುವ ಮೀನುಗಾರರು ವಾಸ ಮಾಡುವ ಚಿತ್ರಾಪುರ ಎಂಬ ಕಡಲ ತಡಿ ಅಪಾಯದ ಅಂಚಿನಲ್ಲಿದೆ. ಚಂಡ ಮಾರುತ ಮತ್ತು ಮಳೆಗಾಲದಲ್ಲಿ ಅಲೆಗಳ ಹೊಡೆತದಿಂದ ಕಡಲ್ಕೊರೆತ ಉಂಟಾಗಿ ಸಾಕಷ್ಟು ದಡ ಕೊರೆತ ಉಂಟಾಗಿದೆ. ಇದ್ರಿಂದ ನಿಸರ್ಗ ಚಂಡ ಮಾರುತು ಜೋರಾದ್ರೆ, ಮಳೆಗಾಲದಲ್ಲಿ ಮಳೆ ಅಬ್ಬರಿಸಿದ್ರೆ ಇಲ್ಲಿರುವ ಒಂದು ಸಾವಿರ ಕುಟುಂಬಗಳು ಬೀದಿಪಾಲಗೋದು ಖಂಡಿತ. ಹೌದು ಇದು ಚಿತ್ರಾಪುರ ನಿವಾಸಿಗಳು ಗೋಳು. ಇಲ್ಲಿ ಕಡಲ್ಕೊರೆತ ಆಗಿ ಆಗಿ ಇವರ ಮನೆಗಳ ಹತ್ತಿರಕ್ಕೆ ಬಂದಿದೆ. ಇನ್ನು ಚಂಡ ಮಾರುತದ ಅಬ್ಬರ ಜೋರಾದ್ರೆ ಇವರ ಮನೆಗಳು ಸಮುದ್ರಪಾಲಾಗುತ್ತವೆ. ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸಿ ಅಂತಾ ಜಿಲ್ಲಾಡಳಿತಕ್ಕೆ ಸಾಕಷ್ಟು ಸಮಯದಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಜಿಲ್ಲಾಡಳಿತ ಇತ್ತ ಗಮನ ಹರಿಸಿಲ್ಲ. ಆದ್ರಿಂದ ಇವರು ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದಾರೆ. ಇಲ್ಲಿನ ಯುವಕರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಕಳೆದ ಒಂದು ವಾರದಿಂದ ಶ್ರಮದಾನ ಮಾಡಿದ್ದಾರೆ. ಹತ್ತು ಸಾವಿರ ಸಿಮೆಂಟ್ ಚೀಲಕ್ಕೆ ಮರಳನ್ನು ತುಂಬಿಸಿ ತಾವೇ ತಡೆಗೋಡೆ ಕಟ್ಟಿದ್ದಾರೆ. ಇನ್ನು ಈ ಕಾರ್ಯವನ್ನು ಆರಂಭಿಸಿದ್ದು ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸುತ್ತಾರೆ ಎಂದು ಮೋಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಹೇಳುತ್ತಾರೆ.
ಅಸಲಿಗೆ ಇವರು ಮೂಲತಃ ಇಲ್ಲಿಯ ನಿವಾಸಿಗಳಲ್ಲ. ಇವರೆಲ್ಲಾ ನವ ಮಂಗಳೂರು ಬಂದರು ಇರುವ ಜಾಗದಲ್ಲಿ ವಾಸವಿದ್ದವರು. ಆದ್ರೆ ಮಂಗಳೂರು ಪೋರ್ಟ್ ನಿರ್ಮಿಸಲು ಇವರನ್ನು ಜಾಗ ಖಾಲಿ ಮಾಡಿಸಲಾಗಿತ್ತು. ಬಂದರು ಆಗುವಲ್ಲಿ ಇವರ ತ್ಯಾಗ ಅಪಾರ. ಇನ್ನು ಇಷ್ಟು ತ್ಯಾಗ ಮಾಡಿ ಇಲ್ಲಿಗೆ ಬಂದು 50 ವರ್ಷ ಆಗಿದೆ. ಆದ್ರೆ ಇವರಿಗೆ ಜಿಲ್ಲಾಡಳಿತ ಅಥವಾ ನವ ಮಂಗಳೂರು ಬಂದರು ಯಾವುದೇ ಸ್ಪಂದನೆ ನೀಡಲ್ಲ. ಆದ್ರಿಂದ ಇವರೆ ಈ ಕೆಲಸಕ್ಕೆ ಮುಂದಾಗಿ ತಮ್ಮ ಜೀವ ಮತ್ತು ಜೀವನವನ್ನು ಉಳಿಸಿಕೊಳ್ಳಲು ತಾವೇ ಮುಂದಾಗಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ ಎಂದು ಗ್ರಾಮದ ಮುಖಂಡ ಶ್ರೀನಿವಾಸ ಪುತ್ರನ್ ತಿಳಿಸಿದ್ದಾರೆ.
ಇನ್ನು ಈ ತಡೆಗೋಡೆ ತಾತ್ಕಾಲಿಕ ಮಾತ್ರ. ಚಂಡ ಮಾರುತದ ಅಬ್ಬರಲ್ಲ ಇದು ಉಳಿಯೋದು ಡೌಟ್. ಆದ್ರಿಂದ ಜಿಲ್ಲಾಡಳಿತ ಇನ್ನಾದ್ರು ಈ ಚಿತ್ರಾಪುರದ ಕಡಲ ಮಕ್ಕಳ ಕಣ್ಣೀರಿಗೆ ಸ್ಪಂದಿಸಿ ಅಲ್ಲಿನ ರಸ್ತೆ, ಮನೆಗಳ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಿಕೊಡಬೇಕಿದೆ.