ಬೆಂಗಳೂರು: ಅಪ್ರಾಪ್ತರ ಜೊತೆ ಸಮ್ಮತಿ ಇದ್ದರೂ ಸೆಕ್ಸ್ ಮಾಡಿದ್ರೆ ಅದು ಕ್ರಿಮಿನಲ್ ಅಪರಾಧ ಎಂದು ಹೈಕೋರ್ಟ್ ಪ್ರಕರಣವೊಂದಕ್ಕೆ ಸಂಬಂಧಿಸಿ ಹೇಳಿದ್ದು ಆರೋಪಿಗೆ ಜಾಮೀನು ನಿರಾಕರಿಸಿದೆ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ 16ರ ಹರೆಯದ ಬಾಲಕಿ ತನ್ನ ಪ್ರೇಮಿ ಕೃಷ್ಣ ಎಂಬವನ ಜೊತೆ ಕೇರಳದ ತಿರುನೆಲ್ಲಿಯ ಆತನ ಮನೆಗೆ ಹೋಗಿದ್ದಳು. ಇತ್ತ ಆಕೆಯ ತಂದೆ ಮರುದಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು ಯುವಕನ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.


ಆರೋಪಿ ಯುವಕ ತನ್ನ ಮೇಲಿನ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಆತನ ಪರ ವಕೀಲರು, ಅವರಿಬ್ಬರೂ ಪ್ರೀತಿಸುತ್ತಿದ್ದು ಪರಸ್ಪರ ಒಪ್ಪಿಗೆಯಿಂದಲೇ ಮನೆ ಬಿಟ್ಟು ಹೋಗಿದ್ದರು. ಬಾಲಕಿ ಎಲ್ಲಿಯೂ ಅತ್ಯಾಚಾರ ಅಥವಾ ಬಲವಂತವಾಗಿ ಲೈಂಗಿಕ ಕ್ರಿಯ ನಡೆದಿದೆ ಎಂದು ಹೇಳಿಲ್ಲ, ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಮನವಿ ತಿರಸ್ಕರಿದ ಹೈಕೋರ್ಟ್, ಪೋಕ್ಸೋ ಕಾಯ್ದೆಯ ಪ್ರಕಾರ 18 ವರ್ಷಕ್ಕಿಂತ ಕೆಳಗಿನವರನ್ನು ಅಪ್ರಾಪ್ತರೆಂದೇ ಪರಿಗಣಿಸಲಾಗುತ್ತದೆ. ಯುವತಿಗೆ 16 ವಯಸ್ಸು ಕಳೆದಿರುವುದರಿಂದ ಬಾಲಕಿಯ ಒಪ್ಪಿಗೆಯಿದ್ದರೂ ಸೆಕ್ಸ್ ಕಾನೂನು ಪ್ರಕಾರ ಅಪರಾಧವಾಗಿದೆ, ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಿದೆ.
