
ಪಂಚರಾಜ್ಯದ ಚುನಾವಣೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು 623 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಎನ್ಐ ಸುದ್ದಿ ಸಂಸ್ಥೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಈ ಬಾರಿ ಕಮಲ ಪಂಚರಾಜ್ಯಗಳಲ್ಲಿ ಅರಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಜನತೆಗೆ ನಮ್ಮ ಆಡಳಿತಾವಧಿಯಲ್ಲಿನ ಅಭಿವೃದ್ಧಿಯ ಕುರಿತು ಮಾಹಿತಿ ಇದೆ. ದೇಶದ ಪ್ರತಿ ಮೂಲೆಯವರೆಗೂ ನಾವು ಸಂಪರ್ಕ ಸಾಧಿಸಿ ದೇಶದ ಅಭ್ಯುದಯಕ್ಕಾಗಿ ಶ್ರಮಿಸಿದ್ದೇವೆ, ಅವರೆಲ್ಲರ ಶ್ರೀರಕ್ಷೆ ನಮ್ಮ ಮೇಲಿದೆ. ಹಾಗೂ ಜನರು ಭಾಜಪದ ಮೇಲೆ ಸಂಪೂರ್ಣ ವಿಶ್ವಾಸ ಹೊದಿಂದಿದ್ದಾರೆ. ಇವೆಲ್ಲ ಕಾರಣಗಳಿಂದ ನಾವು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರಲ್ಲಿ ಆಡಳಿತವನ್ನು ವಹಿಸಿಕೊಳ್ಳಲಿದ್ದೇವೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.

