



ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ಸಂಪತ್ ಜಯರಾಮ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಎಪ್ರಿಲ್ 22 ನೆಲಮಂಗಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಸೂಕ್ತ ಅವಕಾಶವಿಲ್ಲದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸಂಪತ್ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟುಮಾಡಿದೆ.
ಸಾವಿನ ಸುದ್ದಿ ತಿಳಿದು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಆಪ್ತ ಗೆಳೆಯರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ “ಬಾಲಾಜಿ ಫೋಟೊ ಸ್ಟುಡಿಯೋ’ ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರ ಅಭಿನಯದ ಕುರಿತು ಪತ್ರಕರ್ತ, ಸಿನಿಮಾ ವಿಮರ್ಶಕ ನವೀನ್ ಸಾಗರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, “ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ನೋಡಿದಾಗ ಹಾಗೂ ನೋಡಿ ಹೊರಬಂದಮೇಲೂ ಮನಸಲ್ಲಿ ಹೆಚ್ಚು ಉಳಿದಿದ್ದು ಈ ನಟ ಕನ್ನಡಕ್ಕೆ ಒಬ್ಬ ಗಟ್ಟಿ ವಿಲನ್ ಆಗಿ ರೂಪುಗೊಳ್ಳಬಹುದು. ಅಂಥ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದೆ. ಆದರೆ ಬೆಳ್ಳಂಬೆಳಗ್ಗೆ ಸಾವಿನ ಸುದ್ದಿ..’ ಎಂದು ಕಂಬನಿ ಮಿಡಿದಿದ್ದಾರೆ.
ಸಂಪತ್ ಜಯರಾಮ್ ನಿಧನಕ್ಕೆ ನಟ ರಾಜೇಶ್ ಧ್ರುವ ಅವರು ಸಂತಾಪ ಸೂಚಿಸಿದ್ದಾರೆ. ಅಗಲಿದ ಗೆಳೆಯನನ್ನು ನೆನದು ಅವರು ಕಂಬನಿ ಮಿಡಿದಿದ್ದಾರೆ. ‘ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ. ಅದೆಷ್ಟೋ ಸಿನಿಮಾ ಮಾಡೋದಿದೆ. ಅದೆಷ್ಟೋ ಜಗಳ ಬಾಕಿ ಇದೆ. ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ. ಇನ್ನೂ ನಿನ್ನ ದೊಡ್ಡ ದೊಡ್ಡ ಸ್ಟೇಜ್ನಲ್ಲಿ ನೋಡೋದು ಇದೆ ಕಣೋ. ವಾಪಾಸ್ ಬಾರೋ ಪ್ಲೀಸ್’ ಎಂದು ಅವರು ಪೋಸ್ಟ್ ಮಾಡಿದ್ದಾರೆ.