ಕಾಸರಗೋಡು: ಪ್ರಿಯೇಶ್ ಕೊಲೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ

0
74

ಕಾಸರಗೋಡು: ತೃಕ್ಕರಿಪುರ ಮಟ್ಟಮ್ಮಲ್‌ನ ಎಂ. ಪ್ರಿಯೇಶ್ (32) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತೃಕ್ಕರಿಪುರ ಪೊರಪ್ಪಾಡ್‌ನ ಸಫ್ವಾನ್ ( 25) ಬಂಧಿತ ಆರೋಪಿ. ವಿದೇಶಕ್ಕೆ ಪರಾರಿಯಾಗಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.

ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ಸಫ್ವಾನ್ ಇತ್ತೀಚಿಗೆ ಊರಿಗೆ ಬಂದಿದ್ದ. ಡಿಸೆಂಬರ್‍ 4ರಂದು ರಾತ್ರಿ ಮೊಬೈಲ್‌ಗೆ ಕರೆ ಬಂದ ಹಿನ್ನೆಲೆಯಲ್ಲಿ ಹೊರಗಡೆ ಬೈಕ್‌ನಲ್ಲಿ ತೆರಳಿದ್ದ ಪ್ರಿಯೇಶ್ ಮರಳಿ ಮನೆಗೆ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಮನೆಯಿಂದ ಅನತಿ ದೂರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹದ ಬಳಿ ಬೈಕ್ ಕೂಡಾ ಪತ್ತೆಯಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಪ್ರಿಯೇಶ್‌ರನ್ನು ತಂಡವೊಂದು ಥಳಿಸಿ ಕೊಲೆಗೈದಿರುವುದು ದೃಢಪಟ್ಟಿತ್ತು. ಬಳಿಕ ಘಟನೆ ಸಂಬಂಧ ಆರೋಪಿಗಳಾದ ಮುಹಮ್ಮದ್ ಶಬಾಸ್ ಮತ್ತು ಮುಹಮ್ಮದ್ ರಹನಾಸ್ ನನ್ನು ಬಂಧಿಸಲಾಗಿತ್ತು. ಇದೀಗ ಸಫ್ವಾನ್‌ ಬಂಧನದೊಂದಿಗೆ ಮೂವರ ಬಂಧನವಾಗಿದೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.