ಹಾವೇರಿ: ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕ ಹೆಚ್ಚುವರಿಯಾಗಿ ಟ್ಯೂಷನ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆಸಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಈತನ ಲೈಂಗಿಕ ದೌರ್ಜನ್ಯದಿಂದ ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿ ಆಗಿದ್ದಾಳೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಈತ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದು, ಕಾಲೇಜು ಮುಗಿದ ಮೇಲೆ ಟ್ಯೂಷನ್ ನೀಡುತ್ತಿದ್ದ. ಬಿ.ಕಾಂ ಅಂತಿಮ ವರ್ಷದ 22 ವರ್ಷದ ವಿದ್ಯಾರ್ಥಿನಿಯನ್ನು ಒಂದು ವರ್ಷದಿಂದ ಮನೆಗೆ ಕರೆಸಿಕೊಳ್ಳುತ್ತಿದ್ದ.
ಒಂದೂವರೆ ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಏಳೆಂಟು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪ ಕೇಳಿ ಬಂದಿದೆ. ಅಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆಕೆ ದೂರು ನೀಡಿದ್ದಾಳೆ. ಈ ಕೃತ್ಯದಿಂದ ವಿದ್ಯಾರ್ಥಿನಿ ಇದೀಗ ಮೂರು ತಿಂಗಳ ಗರ್ಭಿಣಿ ಆಗಿದ್ದು, ವಿದ್ಯಾರ್ಥಿನಿಯನ್ನು ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ವಿದ್ಯಾರ್ಥಿನಿಯಿಂದ ಸವಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 376(2)(N) ಮತ್ತು 506 ಅಡಿ ದೂರು ದಾಖಲಾಗಿದೆ.