


ಹಾವೇರಿ: ಮದುವೆಯಾಗುವಂತೆ ಯುವತಿ ಮನೆಯವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದಲ್ಲಿ ನಡೆದಿದೆ.
ಗ್ರಾಮದಲ್ಲಿ ವಾಟರಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಸನ್ನ ಲಮಾಣಿ(20)ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾಗುವಂತೆ ಯುವತಿ, ಆಕೆ ಪೋಷಕರು ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಸಾವಿನಿಂದ ನೊಂದ ಪೋಷಕರು ಸದ್ಯ ಯುವತಿ ಸೇರಿದಂತೆ ಮೂವರ ವಿರುದ್ಧ ಹಿರೇಕೆರೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಪ್ರಸನ್ನ ಬಿಡುಗಡೆಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಯುವತಿಯನ್ನು ಮದುವೆ ಆಗು ಎಂದು ಯುವತಿ ಹಾಗೂ ಆಕೆಯ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿ ಮದುವೆಯಾಗು, ಆಕೆಯನ್ನು ಕರೆದುಕೊಂಡು ಹೋಗದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಯುವತಿ ಮನೆಯವರು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದು, ತನ್ನ ಸಾವಿಗೆ ಯುವತಿಯೇ ಕಾರಣ ಎಂದು ವಾಟ್ಸಾಪ್ ಸ್ಟೇಟಸ್ನಲ್ಲಿ ಯುವತಿಯ ಹೆಸರು ಮತ್ತು ಆಕೆಯೊಂದಿಗೆ ಇದ್ದ ಫೋಟೋಗಳನ್ನು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

