


ವಿಶ್ವದ ಹಳೆಯ ನಾಗರಿಕತೆಯಲ್ಲಿ ಒಂದಾದ, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿ ಪಡೆದ ಮೊಹೆಂಜೊದಾರೋ ತನ್ನ ಕುರುಹುಗಳನ್ನು ಕಳೆದುಕೊಳ್ಳುವ ಸನಿಹದಲ್ಲಿದೆ. ಪಾಕಿಸ್ಥಾನದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಆತಂಕ ಉಂಟಾಗಿದೆ. ಮಳೆ ಪ್ರವಾಹದಿಂದಾಗಿ ಹಳೆಯ ನಾಗರಿಕತೆಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಇದರಿಂದ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಮೊಹೆಂಜೊದಾರೋ ನಾಗರಿಕತೆಗೆ ಸುಮಾರು 5,000 ವರ್ಷಗಳ ಇತಿಹಾಸವಿದೆ. ಸಿಂಧೂ ನದಿ ತೀರದಲ್ಲಿ ಉಗಮವಾದ ಮೊಹೆಂಜೊದಾರೋ ನಾಗರಿಕತೆಯು, ಈಜಿಪ್ಟ್ ಮತ್ತು ಮೆಸಪೊಟೊಮಿಯಾ ನಾಗರಿಕತೆಗಿಂತ ಬಹಳ ಹಳೆಯದಾಗಿದೆ. ಈ ತಾಣವು ದಕ್ಷಿಣ ಏಷ್ಯಾದಲ್ಲಿ ಉತ್ತಮ ಸಂರಕ್ಷಿತ ವಸಾಹತುಗಳಲ್ಲಿ ಒಂದಾಗಿದೆ.

ಈ ತಾಣವು ನಗರ ಯೋಜನೆಗೆ ಹೆಸರುವಾಸಿಯಾಗಿದೆ. ಇಟ್ಟಿಗೆಗಳಿಂದ ನಿರ್ಮಿಸಿರುವ ಪಾದಚಾರಿ ಮಾರ್ಗ, ಅಭಿವೃದ್ಧಿಪಡಿಸಲಾದ ನೀರು ಸರಬರಾಜು, ಒಳಚರಂಡಿ ಮತ್ತು ಮುಚ್ಚಿದ ಒಳಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸುಸಜ್ಜಿತ ಮನೆಗಳು ಸೇರಿವೆ.

ನಿರಂತರ ಮಳೆಯಿಂದ ಹಾನಿ
1922ರಲ್ಲಿ ಮೊದಲ ಬಾರಿಗೆ ಮೊಹೆಂಜೊದಾರೋ ನಾಗರಿಕತೆಯ ಪಳೆಯುಳಿಕೆಗಳನ್ನು ಗುರುತಿಸಲಾಯಿತು. ಹವಾಮಾನ ಬದಲಾವಣೆ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಪಾರಂಪರಿಕ ತಾಣ ಮೊಹೆಂಜೊದಾರೋ ಹಾನಿಯ ಭೀತಿ ಎದುರಿಸುತ್ತಿದೆ. ಇನ್ನು ಇದನ್ನು ಸಂರಕ್ಷಿಸುವ ಕಾರ್ಯವು ನಡೆಯುತ್ತಿದೆ.

