ಮಂಗಳೂರು: ಧರ್ಮ ಯಾವುದೇ ಇರಲಿ, ಮಗನನ್ನು ಕಳೆದುಕೊಂಡ ಪ್ರತಿ ತಾಯಿಯ ನೋವು ಕೂಡ ಒಂದೇ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಗಳ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತಹ ಹೇಳಿಕೆಗಳನ್ನು ನೀಡಿ. ಪ್ರಚೋದಿಸುವ ಹೇಳಿಕೆಗಳನ್ನು ನೀಡಿ ಇಲ್ಲಿನ ಶಾಂತಿ ಕದಡಬೇಡಿ. ನಾಯಕರು ಧರ್ಮದ ಬಗ್ಗೆ ದ್ವೇಷ ಉಂಟಾಗುವ ಹೇಳಿಕೆ ನೀಡಬೇಡಿ, ಆಲೋಚನೆ ಮಾಡಿ ಮಾತನಾಡಿ ಎಂದು ಹೇಳಿದರು.
ಕಳೆದ ಹತ್ತು ದಿನಗಳಿಂದ ನಮ್ಮ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಯಲ್ಲಿ ಮೂರು ಯುವಕರ ಹತ್ಯೆ ನಡೆದಿದೆ. ಸರಣಿ ಕೊಲೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಸಮಾಜ ಶಾಂತಿ ನೆಲೆಸಲು ಎಲ್ಲರೂ ಸಹಕಾರ ನೀಡಬೇಕೆಂದರು.
ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿಯ ಘಟನೆ ನಡೆದಾಗ ಒಂದು ಕಡೆ ಹೋಗಿ ಒಬ್ಬರಿಗೆ ಪರಿಹಾರ ಕೊಟ್ಟು ಇನ್ನೊಬ್ಬರನ್ನು ನಿರ್ಲಕ್ಷಿಸಿದ್ದು ನಾಚಿಕೆಯ ಸಂಗತಿಯಾಗಿದೆ. ಧರ್ಮ ಯಾವುದೇ ಇರಲಿ, ಮಗನನ್ನು ಕಳೆದುಕೊಂಡ ಪ್ರತಿ ತಾಯಿಯ ನೋವು ಕೂಡ ಒಂದೇ ಆಗಿರುತ್ತದೆ. ರಾಜ್ಯದ ಮುಖ್ಯಮಂತ್ರಿ ಯಾಗಿ ಪರಿಹಾರ ಘೋಷಿಸುವಾಗ ಹೇಗೆ ತಾರತಮ್ಯ ಮಾಡಲು ಸಾಧ್ಯ? ಪ್ರಜಾಪ್ರಭುತ್ವದ ಸರ್ವರನ್ನೂ ಸಮಾನವಾಗಿ ನೋಡಬೇಕು. ಪರಿಹಾರದ ಹಣವನ್ನು ಸಿಎಂ ಕಿಸೆಯಿಂದ ಕೊಡುವುದಿಲ್ಲ. ಜನರ ತೆರಿಗೆಯಿಂದ ಬರುವ ಹಣವನ್ನು ನೀಡುವಾಗ ಪಕ್ಷಪಾತ ಮಾಡಬಾರದು ಎಂದು ಕಿಡಿಕಾರಿದರು.