
ಬಿಪಿನ್ ರಾವತ್… ದೇಶ ಕಂಡ ಅಪ್ರತಿಮ ಸೇನಾ ನಾಯಕ. ಶತ್ರುರಾಷ್ಟ್ರಗಳ ಚಳಿ ಬಿಡಿಸಿದ್ದ ರಾವತ್ ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿದ್ದಾರೆ. ದೇಶದ ಮೊಟ್ಟಮೊದಲ ಸಿಡಿಎಸ್ ಈಗ ನಮ್ಮೊಂದಿಗಿಲ್ಲ. ಇಂದು ವೀರ ಸೇನಾನಿಯ ಅಂತಿಮಯಾತ್ರೆ ದೆಹಲಿಯಲ್ಲಿ ನಡೆಯಲಿದೆ.

ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದ್ದ ಜನರಲ್ ರಾವತ್ ದುರಂತ ಅಂತ್ಯ ಕಂಡಿದ್ದಾರೆ. ಕೆಚ್ಚೆದೆಯ ಸೇನಾ ಮುಖ್ಯಸ್ಥನನ್ನು ಕಳೆದುಕೊಂಡು ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಊಹಿಸಿಕೊಳ್ಳಲೂ ಸಾಧ್ಯವಾಗದಂಥಾ ಭೀಕರ ದುರಂತ ಭಾರತಮಾತೆಯ ವೀರಪುತ್ರನನ್ನೇ ಬಲಿ ಪಡೆದಿದೆ. ಕಳೆದೆರಡು ದಿನಗಳಿಂದ ದೇಶದ 130 ಕೋಟಿ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.


ಹೆಮ್ಮೆಯ ವೀರಪುತ್ರ ಬಿಪಿನ್ ರಾವತ್ಗೆ ಅಂತಿಮ ವಿದಾಯ
ದೆಹಲಿಯಲ್ಲಿಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ತಮಿಳುನಾಡಿನ ಕೂನೂರು ಅರಣ್ಯ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರೋ ಸಿಡಿಎಸ್ ಬಿಪಿನ್ ರಾವತ್, ಅವ್ರ ಪತ್ನಿ ಮಧುಲಿಕಾ ರಾವತ್ ಹಾಗೂ 11 ಸೇನಾ ಸಿಬ್ಬಂದಿ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ನಡೆಯಲಿದೆ. ಇಂದು ಬೆಳಗ್ಗೆ ಬಿಪಿನ್ ರಾವತ್ ನಿವಾಸದಲ್ಲಿ ರಾವತ್ ಹಾಗೂ ಪತ್ನಿ ಮಧುಲಿಕಾ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವೀರಪುತ್ರನ ಅಂತಿಮ ಯಾತ್ರೆ
ದೆಹಲಿಯ ಕಾಮ್ರಾಜ್ ಮಾರ್ಗ್ನ ಬಿಪಿನ್ ರಾವತ್ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11ರಿಂದ 12.30ರವರೆಗೆ ಸಾರ್ವಜನಿಕರಿಂದ ಅಂತಿಮ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಮಧ್ಯಾಹ್ನ 12.30ರಿಂದ 1.30ರವರೆಗೆ ಸೇನಾ ಸಿಬ್ಬಂದಿಯಿಂದ ಗೌರವ ಸಲ್ಲಿಸಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಯಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ. ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಅಂತಿಮ ಯಾತ್ರೆ ಕಾಮ್ರಾಜ್ ಮಾರ್ಗ್ನ ನಿವಾಸದಿಂದ ಅಂತಿಮ ಯಾತ್ರೆ ಹೊರಡಲಿದೆ. ಇನ್ನು ಸಂಜೆ 4 ಗಂಟೆ ಸುಮಾರಿಗೆ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತೆ.


ಸದ್ಯ ಸಿಡಿಎಸ್ ಬಿಪಿನ್ ರಾವತ್ ಮನೆಯ ಮುಂದೆ ಜನ ಸಾಗರವೇ ಹರಿದು ಬರ್ತಿದೆ. ಬಿಪಿನ್ ರಾವತ್ ಅವರ ಪೋಟೋ ಫ್ಲೆಕ್ಸ್ಗಳನ್ನ ಹಿಡಿದು ಅವರ ಮನೆ ಮುಂದೆ ದೌಡಾಯಿಸ್ತಿದ್ದಾರೆ. ಬಿಪಿನ್ ರಾವತ್ ಅಮರ್ ರಹೇ ಎಂಬ ಘೋಷಣೆಗಳನ್ನ ಕೂಗ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಪಿನ್ ನಿವಾಸದ ಬಳಿ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ.

ಇನ್ನು ಬ್ರಿಗೇಡಿಯರ್ ಲಿಡ್ಡರ್ರ ಅಂತ್ಯಕ್ರಿಯೆಯನ್ನು ಬೆಳಗ್ಗೆ 9 ಗಂಟೆಗೆ ನೆರವೇರಿಸಲಾಗುತ್ತೆ. ಒಟ್ನಲ್ಲಿ ಭಾರವಾದ ಮನಸ್ಸಿನೊಂದಿಗೆ ಭಾರತದ ಹೆಮ್ಮೆಯ ವೀರಪುತ್ರ ಶತ್ರು ರಾಷ್ಟ್ರಗಳ ಪಾಲಿನ ಸಿಂಹಸ್ವಪ್ನದಂತಿದ್ದ ಬಿಪಿನ್ ರಾವತ್ ದುರಂತ ಅಂತ್ಯ ನಮ್ಮ ಪಾಲಿಗೆ ತುಂಬಲಾಗದ ನಷ್ಟವೇ ಸರಿ. ಜನರಲ್ ಬಿಪಿನ್ ರಾವತ್ ಅಮರ್ ರಹೇ… ಅಮರ್ ರಹೇ… ಅಮರ್ ರಹೇ.


