Tuesday, April 23, 2024
spot_imgspot_img
spot_imgspot_img

ಈ ವರ್ಷದ ಟಾಪ್ 10 ಜನಪ್ರಿಯ ಭಾರತೀಯ ಸಿನಿಮಾಗಳು ಯಾವುವು ಗೊತ್ತಾ.!?

- Advertisement -G L Acharya panikkar
- Advertisement -

ವಿಶ್ವದ ನಂಬಿಕಾರ್ಹ ಸಿನಿಮಾ ರೇಟಿಂಗ್ ಸಂಸ್ಥೆ ಎನಿಸಿಕೊಂಡಿರುವ ಐಎಂಡಿಬಿ ವರ್ಷದ ಪ್ರಥಮಾರ್ಧದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಮೊದಲ ಆರು ತಿಂಗಳಲ್ಲಿ ಬಿಡುಗಡೆ ಆದ ಸಿನಿಮಾಗಳಲ್ಲಿ ಯಾವುದು ಉತ್ತಮ, ಯಾವುದು ಅತ್ಯುತ್ತಮ ಎಂಬ ಪಟ್ಟಿಯನ್ನು ಐಎಂಡಿಬಿ ಹೊರಬಿಟ್ಟಿದೆ. ಕನ್ನಡ, ಹಿಂದಿ, ತಮಿಳ್, ತೆಲುಗು, ಮಾಲಯಾಳಂ 5 ಭಾಷೆಗಳ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

ಹತ್ತನೇ ಸ್ಥಾನದಲ್ಲಿ ‘ಹೃದಯಂ’
ಐಎಂಡಿಬಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಲಯಾಳಂನ ‘ಹೃದಯಂ’ ಸಿನಿಮಾ ಹತ್ತನೇ ಸ್ಥಾನದಲ್ಲಿದೆ. ಮೋಹನ್‌ಲಾಲ್ ಪುತ್ರನ ಈ ಸಿನಿಮಾ ಇದೇ ವರ್ಷ ಜನವರಿ 21 ರಂದು ಬಿಡುಗಡೆ ಆಗಿ ಹಿಟ್ ಆಗಿತ್ತು. ಕಾಲೇಜು ಕತೆಯ ಜೊತೆಗೆ ಯುವಕನೊಬ್ಬನ ಭಾವುಕ ಪಯಣದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಒಂಬತ್ತನೇ ಸ್ಥಾನದಲ್ಲಿ ‘ಏ ಥರ್ಸ್‌ ಡೇ’
ಶಾಲಾ ಶಿಕ್ಷಕಿಯೊಬ್ಬಾಕೆ ತಾನು ಪಾಠ ಮಾಡುವ ಮಕ್ಕಳನ್ನೇ ತನ್ನ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಭಿನ್ನ ಥ್ರಿಲ್ಲರ್ ಕತೆ ಹೊಂದಿರುವ ‘ಏ ಥರ್ಸ್‌ ಡೇ’ ಸಿನಿಮಾ ಒಂಬತ್ತನೇ ಸ್ಥಾನದಲ್ಲಿದೆ. ಯಾಮಿ ಗುಪ್ತಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಫೆಬ್ರವರಿ 17 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿತ್ತು.

ಎಂಟನೇ ಸ್ಥಾನದಲ್ಲಿ ‘ರನ್‌ ವೇ 34’
ಇಂಗ್ಲೀಷ್‌ ಸಿನಿಮಾದಿಂದ ಸ್ಪೂರ್ತಿ ಪಡೆದ ಥ್ರಿಲ್ಲರ್ ಸಿನಿಮಾ ‘ರನ್‌ ವೇ 34’ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಅಜಯ್ ದೇವಗನ್ ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾ ವಿಮಾನದ ಪೈಲೆಟ್ ಒಬ್ಬನ ವಿರುದ್ಧ ನಡೆಯುವ ತನಿಖೆಯ ಕುರಿತ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಸಿನಿಮಾವು ಏಪ್ರಿಲ್ 29 ರಂದು ಬಿಡುಗಡೆ ಆಗಿತ್ತು.

ಏಳನೇ ಸ್ಥಾನದಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’
ಬಾಲಿವುಡ್‌ನ ಬಹುದೊಡ್ಡ ಫ್ಲಾಪ್‌ ಸಿನಿಮಾಗಳಲ್ಲಿ ಒಂದಾದ ‘ಸಾಮ್ರಾಟ್ ಪೃಥ್ವಿರಾಜ್’ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವುದು ಆಶ್ಚರ್ಯಕರ. ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್, ಸೋನು ಸೂದ್ ನಟನೆಯ ಈ ಸಿನಿಮಾ ಜೂನ್ 03 ರಂದು ಬಿಡುಗಡೆ ಆಗಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ದೊಡ್ಡ ಫ್ಲಾಪ್ ಆಯಿತು.

ಆರನೇ ಸ್ಥಾನದಲ್ಲಿ ‘ಝುಂಡ್’
ಶೋಷಿತ ವರ್ಗದವರ ಕತೆಯುಳ್ಳ ‘ಝುಂಡ್’ ಸಿನಿಮಾ ಆರನೇ ಸ್ಥಾನದಲ್ಲಿದೆ. ದಲಿತರ ಕೇರಿಯ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯುವಕರ ಕತೆ ಹೊಂದಿರುವ ‘ಝುಂಡ್’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜನಪ್ರಿಯ ನಿರ್ದೇಶಕ ನಾಗರಾಜ್ ಮಂಜುಳೆ ನಿರ್ದೇಶನ ಮಾಡಿದ್ದಾರೆ.

ಐದನೇ ಸ್ಥಾನದಲ್ಲಿ “ವಿಕ್ರಮ್”
ಐದನೇ ಸ್ಥಾನದಲ್ಲಿ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ತಮಿಳು ಸಿನಿಮಾ ‘ವಿಕ್ರಮ್’ ಇದೆ. ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ ನಟನೆಯ ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದು, ಜೂನ್ 03 ರಂದು ಸಿನಿಮಾ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಯಿತು.

ನಾಲ್ಕನೇ ಸ್ಥಾನದಲ್ಲಿ “ಗಂಗೂಬಾಯಿ”
ನಾಲ್ಕನೇ ಸ್ಥಾನದಲ್ಲಿ ಮತ್ತೊಂದು ಹಿಂದಿ ಸಿನಿಮಾ ‘ಗಂಗೂಬಾಯಿ ಕಾಠಿಯಾವಾಡಿ’ ಇದೆ. ಆಲಿಯಾ ಭಟ್ ನಟಿಸಿರುವ ಈ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ನಿಜ ವ್ಯಕ್ತಿಯ ಜೀವನ ಆಧರಿಸಿ ಈ ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಆಲಿಯಾ ಭಟ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೂರನೇ ಸ್ಥಾನದಲ್ಲಿ ‘RRR’
ಮೂರನೇ ಸ್ಥಾನದಲ್ಲಿ ಈ ವರ್ಷದ ಬ್ಲಾಕ್‌ ಬಸ್ಟರ್‌ಗಳಲ್ಲಿ ಒಂದಾದ ‘RRR’ ಸಿನಿಮಾ ಇದೆ. ರಾಜಮೌಳಿ ನಿರ್ದೇಶಿಸಿ, ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ಮಾರ್ಚ್ 24 ರಂದು ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. 1200 ಕೋಟಿಗೂ ಹೆಚ್ಚು ಹಣ ಗಳಿಸಿದೆ.

ಎರಡನೇ ಸ್ಥಾನದಲ್ಲಿ ‘ಕೆಜಿಎಫ್ 2’
ಕನ್ನಡದ ಹೆಮ್ಮೆಯ ಸಿನಿಮಾಗಳಲ್ಲಿ ಒಂದಾದ ‘ಕೆಜಿಎಫ್ 2’ ಸಿನಿಮಾ ಈವರೆಗೆ ಬಿಡುಗಡೆ ಆದ ಭಾರತದ ಸಿನಿಮಾಗಳ ಪೈಕಿ ಎರಡನೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ. ಐಎಂಡಿಬಿಯ ಕೆಲವು ನಿಯಮಗಳಿಂದಾಗಿ ಈ ಸಿನಿಮಾ ಮೊದಲ ಸ್ಥಾನ ಕಳೆದುಕೊಂಡಿರುವ ಸಾಧ್ಯತೆಯೂ ಇದೆ. ಯಶ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿತ್ತು. ಈ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೊದಲ ಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’
ಹಲವು ವಿವಾದಗಳಿಗೆ, ಚರ್ಚೆಗೆ ಕಾರಣವಾಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ಪಟ್ಟಿಯ ಮೊದಲ ಸ್ಥಾನದಲ್ಲಿದೆ. 1990ರ ಸಮಯದಲ್ಲಿ ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸೆಯ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಅನುಪಮ್ ಖೇರ್ ನಟಿಸಿ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದ ಈ ಸಿನಿಮಾ ಮಾರ್ಚ್ 11 ರಂದು ಬಿಡುಗಡೆ ಆಗಿತ್ತು. ಬಹುತೇಕ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಯ್ತು. ಸ್ವತಃ ಪ್ರಧಾನಿ ಮೋದಿಯವರು ಸಿನಿಮಾದ ಬಗ್ಗೆ ಮಾತನಾಡಿ ಪರೋಕ್ಷ ಪ್ರಚಾರ ನೀಡಿದರು. ಆದರೆ ಈ ಸಿನಿಮಾದಲ್ಲಿ ಮುಸ್ಲಿಂ ಸಮುದಾಯದ ಕುರಿತಾಗಿ ಸಾಮೂಹಿಕ ದ್ವೇಷ ಭಾವ ಇದೆ ಎಂಬ ಆರೋಪ ಹಾಗೂ ಹಿಂಸೆಯ ಅತಿ ವೈಭವೀಕರಣ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿತ್ತು.

- Advertisement -

Related news

error: Content is protected !!