
ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋರ್ಟ್ ತೀರ್ಪು ಉಲ್ಲಂಘಿಸಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಅಮಾನತುಗೊಳಿಸಿದ ಹಿನ್ನೆಲೆ ಕಾಲೇಜಿನಲ್ಲಿ ಕೆಲವು ಘಟನೆ ನಡೆದಿದ್ದು, ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳನ್ನು ಹಿಜಾಬ್ ಪರವಾಗಿದ್ದ ವಿದ್ಯಾರ್ಥಿಗಳು ಕೋಣೆಯಲ್ಲಿ ಕೂಡಿ ಹಾಕಿ ಬಲವಂತವಾಗಿ ಕ್ಯಾಮರಾ ಕಸಿದುಕೊಂಡು ಮಾಧ್ಯಮದವರು ಮಾಡಿದ ವೀಡಿಯೊವನ್ನು ಡಿಲೀಟ್ ಮಾಡಿಸಿ ಹಲ್ಲೆ ಮಾಡಿರುವ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸಿದೆ.

ಕಾರ್ಯಾಂಗ, ನ್ಯಾಯಾಂಗ ರೀತಿಯಲ್ಲಿಯೇ ಪತ್ರಿಕಾ ಮಾಧ್ಯಮವೂ ಪ್ರಜಾಪ್ರಭುತ್ವ ಒಂದು ಭಾಗವಾಗಿದ್ದು, ವರದಿ ಕೇಳಲು ತೆರಳಿದ್ದ ಮಾಧ್ಯಮ ವರ್ಗದವರ ಮೇಲೆ ಹಲ್ಲೆ ನಡೆಸಿದ್ದು ಅಪರಾಧವಾಗಿದೆ. ಅದೇ ರೀತಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇಂತಹ ಘರ್ಷಣೆಗೆ ಕುಮ್ಮಕ್ಕು ನೀಡಿದ್ದು ಅಪರಾಧವಾಗಿದೆ ಈ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತಿದ್ದು, ಮತ್ತೆ ಈ ಘಟನೆಯಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಇದ್ದರಾ ಅಥವಾ ವಿದ್ಯಾರ್ಥಿಗಳ ಜೊತೆ ಹೊರಗಿನವರು ಸೇರಿಕೊಂಡು ಇದ್ದಾರ ಎಂಬ ಸಂಶಯವಿದೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು.

ಅದೇ ರೀತಿ ಈವಾಗ ಹಲ್ಲೆಗೊಳಗಾದ ಅಮಾಯಕ ಪತ್ರಿಕೋದ್ಯಮದ ಪ್ರತಿನಿಧಿಯ ವಿರುದ್ಧ ಸುಳ್ಳು ಕೇಸನ್ನು ನೀಡಿ ಅವರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಕೆಲವಾರು ಕಾಣದ ಕೈಗಳು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೇಳಿ ಬರುತ್ತಿದ್ದು ಒಂದು ವೇಳೆ ಹಲ್ಲೆಗೊಳಗಾದ ಪತ್ರಿಕಾ ಪ್ರತಿನಿಧಿ ವಿರುದ್ಧ ಸುಳ್ಳು ಕೇಸನ್ನು ದಾಖಲು ಮಾಡಿದರೆ ಅದರ ವಿರುದ್ಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಬೇಕಾದಿತು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಪದೇ ಪದೇ ಇದೇ ರೀತಿಯ ಘಟನೆಗಳು ನಡೆಯುತ್ತಿದ್ದರೆ ಸಂಘಟನೆ ಮತ್ತು ಹಿಂದೂ ಸಮಾಜ ಸುಮ್ಮನಿರುವುದಿಲ್ಲ, ಯಾರು ಈ ಹಿಜಾಬ್ ನ ವಿಷಯದಲ್ಲಿ ಶಾಲಾ-ಕಾಲೇಜಿನ ಶಾಂತಿಯನ್ನು ಮತ್ತು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೊ ಅವರಿಗೆ ಇದು ಕೊನೆಯ ಎಚ್ಚರಿಕೆಯಾಗಿದ್ದು, ಅದೇ ರೀತಿ ಇಲಾಖೆಯು ಈ ರೀತಿಯ ಕೃತ್ಯ ನಡೆದ ತಕ್ಷಣ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಸರಿಯಾದ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.









