Saturday, April 20, 2024
spot_imgspot_img
spot_imgspot_img

ಉಳ್ಳಾಲ: ಯಾವುದೇ ಅನುಮತಿ ಇಲ್ಲದೆ ಬೀಚ್ ಫೆಸ್ಟಿವಲ್ ಆಯೋಜನೆ; ಹಿಂದೂ ಸಂಘಟನೆ ಕಾರ್ಯಕರ್ತರ ಕೆಂಗಣ್ಣು

- Advertisement -G L Acharya panikkar
- Advertisement -

ಉಳ್ಳಾಲ: ಯಾವುದೇ ಅನುಮತಿ ಇಲ್ಲದೆಯೇ ಖಾಸಗಿ ವ್ಯಕ್ತಿಯೋರ್ವ ಉಳ್ಳಾಲದಲ್ಲಿ ಒಂದು ತಿಂಗಳ ಕಾಲ ಬೀಚ್ ಫೆಸ್ಟಿವಲ್ ಆಯೋಜನೆಗೆ ಮುಂದಾಗಿರುವುದು ಹಿಂದು ಸಂಘಟನೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ದಸರಾ ಸಂದರ್ಭದಲ್ಲೇ ಬೀಚ್‌ ಉತ್ಸವ ನಡೆಸಲು ಖಾಸಗಿ ವ್ಯಕ್ತಿ ಹಠ ಹಿಡಿದಿರುವುದು ಉಳ್ಳಾಲ ದಸರಾ ಮಹೋತ್ಸವ ಹಾಳು ಗೆಡುವಲು ನಡೆಸಿದ ಯೋಜಿತ ಷಡ್ಯಂತ್ರ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಫಾರೂಕ್ ಯಾನೆ ಮಾನ ಫಾರೂಕ್ ಎಂಬವರು ಉಳ್ಳಾಲ ಕಡಲ ಕಿನಾರೆಯಲ್ಲಿ ಒಂದು ತಿಂಗಳ ಕಾಲ ಬೀಚ್ ಫೆಸ್ಟಿವಲ್ ನಡೆಸಲು ಮುಂದಾಗಿದ್ದಾರೆ. ಬೀಚ್ ಉತ್ಸವದ ಸಂದರ್ಭ ನೂರಕ್ಕೂ ಹೆಚ್ಚು ಸ್ಟಾಲ್‌ ಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಉಳ್ಳಾಲ ಕಡಲ ತಡಿಯ ಪಕ್ಕ ಇರುವ ಖಾಸಗಿ ಜಮೀನನ್ನ ಲೀಸ್ ಗೆ ಪಡೆದಿರುವ ಫಾರೂಕ್ ಹತ್ತಿರದ ಒಂದು ರುದ್ರಭೂಮಿಗೆ ಸೇರಿರುವ ಜಾಗವನ್ನೂ ಅತಿಕ್ರಮಿಸಿ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬೀಚ್ ಫೆಸ್ಟಿವಲ್‌ ನಡೆಸಲು ಅನುಮತಿ ನೀಡಬಾರದೆಂದು ಉಳ್ಳಾಲ ಮೊಗವೀರ ಸಂಘ ಮತ್ತು ಹಿಂದೂ ರುದ್ರಭೂಮಿಯ ಶವ ಸಂಸ್ಕಾರ ಸಮಿತಿಯವರು ಉಳ್ಳಾಲ ನಗರಾಡಳಿತ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಉಳ್ಳಾಲ ನಗರಸಭೆ ಆಯುಕ್ತರಾದ ವಿದ್ಯಾ ಕಾಳೆ ರಸ್ತೆ ಬದಿ ಹಾಕಲಾಗಿದ್ದ ಬೀಚ್ ಫೆಸ್ಟಿವಲ್ ಬ್ಯಾನರ್ ಗಳನ್ನ ತೆರವುಗೊಳಿಸಿದಲ್ಲದೇ ಬೀಚ್ ಉತ್ಸವಕ್ಕಾಗಿ ನಡೆಸುತ್ತಿದ್ದ ಸಿದ್ಧತಾ ಕಾಮಗಾರಿಯನ್ನ ತಡೆಹಿಡಿದಿದ್ದಾರೆ.

ಈ ಬಾರಿ ಉಳ್ಳಾಲದಲ್ಲಿ ದಸರಾ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಸಂಭ್ರಮ – ಸಡಗರ ಮನೆ ಮಾಡಿದೆ. ಈ ನಡುವೆ ಉಳ್ಳಾಲದಲ್ಲಿ ಬೀಚ್ ಫೆಸ್ಟಿವಲ್ ನಡೆಸಲು ಅನುಮತಿ ಕೋರಿ ಬಂದಿದ್ದ ಫಾರೂಕ್ ಅವರಿಗೆ ಈ ಹಿಂದೆಯೇ ನಗರಸಭೆ ಪೌರಾಯುಕ್ತರು ಅನುಮತಿ ನಿರಾಕರಿಸಿದ್ದರು. ಆದರೆ ರಾಜಕೀಯ ಪ್ರಭಾವದಿಂದ ಹಠ ಹಿಡಿದಿರುವ ಫಾರೂಕ್ ಸೆ.30 ರಿಂದ ಅ.30 ರವರೆಗೆ ಬೀಚ್ ಫೆಸ್ಟಿವಲ್ ನಡೆಸಲು ಸಿದ್ಧತೆ ನಡೆಸಿರುವುದು ಉಳ್ಳಾಲದ ಹಿಂದೂ ಕಾರ್ಯಕರ್ತರ ಕೆಣ್ಣು ಕೆಂಪಗಾಗಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು, ಉಳ್ಳಾಲದಲ್ಲಿ ಈ ಹಿಂದೆ ಮಾರುತಿ ಯುವಕ ಮಂಡಲ ಮತ್ತು ಬ್ರದರ್ಸ್ ಯುವಕ ಮಂಡಲಗಳು ಸರಕಾರದ ಸಹಕಾರದಲ್ಲಿ ಎರಡು ದಿವಸಗಳ ಅದ್ಧೂರಿ ಬೀಚ್ ಉತ್ಸವಗಳನ್ನ ಆಯೋಜಿಸಿತ್ತು. ಇದೀಗ ಫಾರೂಕ್‌ ಎಂಬವರು ಒಂದು ತಿಂಗಳ ಕಾಲ ಬೀಚ್ ಉತ್ಸವ ನಡೆಸಲು ಮುಂದಾಗಿದ್ದು ಇದರಿಂದಾಗಿ ಉಳ್ಳಾಲದಲ್ಲಿ ಒಂದೆಡೆ ಟ್ರಾಫಿಕ್ ಸಮಸ್ಯೆ ತಲೆದೋರಿದರೆ ಮತ್ತೊಂದೆಡೆ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೀಚ್ ಉತ್ಸವಕ್ಕೆ ಅನುಮತಿ ನಿರಾಕರಿಸಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ. ಒಂದು ವೇಳೆ ಅನುಮತಿ ನೀಡಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರು ನೀಡಿದ್ದಾರೆ.

vtv vitla
- Advertisement -

Related news

error: Content is protected !!