Thursday, May 2, 2024
spot_imgspot_img
spot_imgspot_img

ಕಷ್ಟ ಹೊರಗೆ ಕಾಣಿಸದು ನೋಡುವ ಕಣ್ಣಿರಬೇಕು – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya panikkar
- Advertisement -

ಮನುಷ್ಯಾಣಾo ಸಹಸ್ರೇಷು ಕಶ್ಚಿದ್ಯತತಿ ಸಿದ್ದಯೇ |
ಯತತಾಮಪಿ ಸಿದ್ದಾನಾಮ್ ಕಶ್ಚಿನ್ಮಾo ವೇತ್ತಿ ತತ್ತ್ವತಃ ||

ಭಗವಂತನು ಪಾರ್ಥನಲ್ಲಿ ಸಾವಿರಾರು ಮನುಷ್ಯರಲ್ಲಿ ಅನುಭವದಿಂದ ಕೊನೆಗೊಳ್ಳುವ ಜ್ಞಾನ ಸಿದ್ದಿಗಾಗಿ ಕೆಲವರಷ್ಟೇ ಪ್ರಯತ್ನಿಸುತ್ತಾರೆ ಎಂದು ಹೇಳುತ್ತಾ, ಆ ರೀತಿ ಪ್ರಯತ್ನ ಪಡುವವರಲ್ಲೂ ಎಲ್ಲೋ ಒಬ್ಬ ಯಥಾವತ್ತಾಗಿ ನನ್ನನ್ನು ಅರಿಯುತ್ತಾನೆ ಎಂಬುದಾಗಿ ತಿಳಿಸುತ್ತಾನೆ. ಈ ಅರಿಯುವಿಕೆಗೆ ಪ್ರಯತ್ನವೆಂಬುದು ನಿತ್ಯ ನಿರಂತರವಾಗಿರಬೇಕು. ಹಾಗಾದಾಗ ಮಾತ್ರ ಅದು ಫಲಿಸುತ್ತದೆ, ಸಿದ್ಧಿಸುತ್ತದೆ. ಪ್ರಯತ್ನ ಎಂಬುದು ಪ್ರತಿ ದಿನವೂ ನಮ್ಮ ಜೊತೆ ಜೊತೆಯಲ್ಲಿಯೇ ಸಾಗುತ್ತಿರುತ್ತದೆ. ಉತ್ತಮ ಕಾರ್ಯಗಳ ಪ್ರಯತ್ನವು ಉತ್ತಮವಾದ ಫಲವನ್ನೇ ನೀಡುತ್ತದೆ. ಮಾವಿನ ಗಿಡ ನೆಟ್ಟು ಮಾವನ್ನೇ ಪಡೆದಂತೆ. ಅದರ ಹುಟ್ಟು ಮನಸ್ಸಿನ ಪ್ರೇರಣೆಯೂ ಆಗಿರಬಹುದು. ಪ್ರಯತ್ನ ಮತ್ತು ಮನಸ್ಸು ಎರಡು ಕಾಲುಗಳಿದ್ದಂತೆ. ಅದಕ್ಕೆ ಸ್ಪರ್ಧೆಯೆoಬುದಿಲ್ಲ. ಆದರೂ ಒಂದನ್ನು ಬಿಟ್ಟು ಇನ್ನೊಂದಿಲ್ಲ .

ಹಾಗಾದಾಗಲೇ ಹೆಜ್ಜೆಗಳು ಮುಂದೆ ಮುಂದೆ ಸಾಗುತ್ತಿರುತ್ತವೆ. ಹೆಜ್ಜೆಗಳ ಗುರುತು ತಾನಾಗಿ ಮೂಡುತ್ತವೆ. ವರ್ತಮಾನವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಮಾತ್ರ ಒಳಿತೆoಬ ಕುರುಹಿಗೆ ಗುರುತು ಮೂಡಲು ಸಾಧ್ಯವಾಗುತ್ತದೆ. ಅದು ಭವಿಷ್ಯಕ್ಕೆ ಆಶಾದಾಯಕವಾಗಿರುತ್ತದೆ. ಬದುಕು ಅದರ ಹಿಂದೆಯೇ ಸಾಗಿದಂತೆ ಮಾಗುವ ಕಾರ್ಯವು ತಾನಾಗೇ ಸೃಷ್ಟಿಯಾಗುತ್ತಾ ಹೋಗುತ್ತದೆ. ದೇವರಿಚ್ಛೆ ಎಂದು ತಿಳಿದುಕೊಂಡು ಒಳಿತು ಮಾಡುತ್ತಾ ತಮಗೆಷ್ಟು ಲಭ್ಯವೊ ಅದನ್ನು ಮಾತ್ರ ಅನುಭವಿಸುತ್ತ ಮುಂದೆ ಸಾಗಬೇಕು. ಅದು ಹೊರತು ಚಿಂತೆಗಳ ಮೂಟೆಯನ್ನು ದಿನ ದಿನವೂ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಕಸಗಳನ್ನು ಕೊಟ್ಟು ಬಿಡುವಂತೆ ಬಿಟ್ಟು ಬಿಡಬೇಕು. ಬಿಟ್ಟೇನೆಂದರೂ ಬಿಡದೀ ಮಾಯೆಯಂತೆ ಮೋಹವೆಂಬ ಪಾಶಕ್ಕೆ ಒಳಗಾಗದೇ ಸರಳವಾಗಿರುವುದನ್ನು ಕಲಿಯಬೇಕು.

ಇನ್ನೊಬ್ಬರಿಗೆ ಸೇರಬೇಕಾದ ಯಾವುದೇ ವಸ್ತುಗಳಾಗಲಿ ಅದನ್ನು ತಾನೊಬ್ಬನೇ ಅನುಭವಿಸಬೇಕು ಎನ್ನುವ ಮನಸ್ಥಿತಿಯನ್ನು ಬದಲಾಯಿಸಿಕೊಂಡಾಗ ಬದುಕಿನ ದಾರಿ ಸುಂದರವಾಗುತ್ತದೆ. ಕಾಗೆ ತನಗೆ ಸಿಕ್ಕ ಕಾಳನ್ನು ತಾನೊಂದೇ ತಿನ್ನದೆ ತನ್ನ ಬಳಗವನ್ನು ಕಾ ಎನ್ನುತ್ತಾ ಕೂಗಿ ಕರೆದು ಸಂತೋಷಪಡುತ್ತದೆ. ಬದುಕು ಎಂದರೆ ಹೀಗೇ ಎಂದು ಅದಕ್ಕೆ ಉಪದೇಶ ಯಾರಾದರೂ ಮಾಡಿದರೇನು? ಅದಕ್ಕೆ ಆ ಬುದ್ಧಿ ನೀಡಿದವರು ಯಾರು? ಎಂಬಿತ್ಯಾದಿ ಚಿಂತನೆಗಳು ಮನುಷ್ಯನ ಚಿಂತನೆಗೆ ಬಾರದೇ ಹೋದರೆ ಬದುಕು ಬಲು ಭಾರವೇ ಆಗುವುದು. ತಂದೆ ತಾಯಿಯ ಆಸ್ತಿ, ಸಂಪತ್ತು ಹಣ ಎಲ್ಲಾ ಮಕ್ಕಳಿಗೂ ಸಮಾನವಾಗಿರುತ್ತದೆ. ಆದರೆ ಅವೆಲ್ಲವನ್ನೂ ತಾನೊಬ್ಬನೇ ಅನುಭವಿಸುತ್ತ ಒಡಹುಟ್ಟಿದವರ ಬಗ್ಗೆ ಕಿಂಚಿತ್ತೂ ಗಮನಿಸದೆ ಬದುಕುವುದು ದೊಡ್ಡ ಪಾಪವೇ ಮಾಡಿದಂತಾಗುವುದು.

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದು ಬಂದ ಮೇಲೆ ದುರುದ್ದೇಶವಿಟ್ಟುಕೊಂಡು ಅವರಿಗೆ ಸಿಗಬೇಕಾದ ಚರಾಚರ ಸೊತ್ತುಗಳನ್ನು ಒಬ್ಬೊಬ್ಬರೇ ಅನುಭವಿಸುತ್ತ ಬದುಕುವ ಬದುಕು ಒಂದು ಬದುಕೇ? ಈ ಭೂಮಿಗೆ ಬರ್ತಾ ಯಾರೂ ಏನನ್ನೂ ಹೊತ್ತು ತಂದವರಿಲ್ಲ. ಹಾಗೇ ಹೋಗ್ತಾ ಏನೂ ತಕೊಂಡು ಹೋಗೋ ಹಾಗಿಲ್ಲ. ಹಾಗಿದ್ದೂ ತಾನೊಬ್ಬನೇ ತಿಂದು ಎಷ್ಟು ಜೀರ್ಣಿಸಿಕೊಳ್ಳಬಹುದು ? ಈ ಭೂಮಿ ಮೇಲೆ ಶಾಶ್ವತವಾಗಿ ಉಳಿಯುವ ದೇಹ ಯಾರದೂ ಅಲ್ಲ. ಅಂದ ಮೇಲೆ ಚರಾಚರ ವಸ್ತುಗಳಿಗೆ ಇನ್ನಿಲ್ಲದಷ್ಟು ಮೋಹ ಅಗತ್ಯವಾದರೂ ಯಾಕೆ? ದುಡಿದು ತಿಂದರೇನೇ ಜೀರ್ಣವಾಗೋದು ಕಷ್ಟ. ಅಂತಾದ್ರಲ್ಲಿ ದುಡಿಯದೇ ಒಳ್ಳೆಯ ಬಾಳು ಬಾಳಬೇಕು ಎಂಬ ನೀತಿಯನ್ನು ಮಕ್ಕಳಿಗೂ ಕಲಿಸುತ್ತಾ ತಾನೂ ಅದರಂತೆ ನಡೆಯುವುದು ತಪ್ಪು.

ಅವರವರ ಜೀವನಕ್ಕೆ ಅವರವರೇ ಹೊಣೆಗಾರರಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅಷ್ಟಕ್ಕೂ ಮನುಷ್ಯರಾಗಿ ಹುಟ್ಟಿದ ಬಳಿಕ ಇನ್ನೊಬ್ಬರ ಜೀವನದ ಆದಾಯವನ್ನು ತಾನೇ ಅನುಭವಿಸುತ್ತ ಮೆರೆಯುವುದೂ ಒಂದು ಹೀನ ಬದುಕೇ ಹೌದು. ಪ್ರಾಣಿಗಳಿಗಿಂತಲೂ ಕ್ಷುದ್ರವಾಗಿ ಬದುಕಿ ಮೆರೆಯುವುದು ದೊಡ್ಡತನ ಅಲ್ಲ. ಅದು ದಡ್ಡತನ!! ಅಂತಹ ಬದುಕಿಗೆ ಯಾವತ್ತೂ ಮನ ಮಾಡದೇ ತನ್ನ ಕೈ ಕಾಲುಗಳನ್ನು ಶಕ್ತಿಯುತವಾಗಿ ಬಳಸಿಕೊಳ್ಳುವುದರಲ್ಲಿದೆ ಜಾಣ್ಮೆ. ಇನ್ನೊಬ್ಬರ ಅನ್ನದ ಗಳಿಕೆ ತನಗೆ ಬೇಡ ಎನ್ನುವ ಧೋರಣೆ ತಳೆಯುವ ಅಂತರಾತ್ಮ ಧೀರರು ಆಗಬೇಕಾಗಿದೆ. ತಮ್ಮ ಯೋಚನಾ ಶಕ್ತಿಯನ್ನು ಇತರರಿಗೆ ನೋವಾಗದ ರೀತಿಯಲ್ಲಿ ಬದಲಾಯಿಸಿ ಕೊಳ್ಳಬೇಕಿದೆ. ತಾನೊಬ್ಬನೇ ತಿಂದು ತೇಗಬೇಕೆಂಬ ಹಂಬಲವನ್ನು ಆ ಕೃಷ್ಣ ಪರಮಾತ್ಮ ಎಂದೂ ಉಪದೇಶ ಮಾಡಿದ್ದಿಲ್ಲ.

ಬದುಕಿನ ನೆಮ್ಮದಿಗೆ ಅವರವರು ಎಷ್ಟು ಪಡೆಯಲು ಅರ್ಹರೋ ಅಷ್ಟು ಮಾತ್ರವೇ ಪಡೆದು ಉಳಿದುದನ್ನು ತಮ್ಮ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೇಳದಿದ್ದರೂ ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಅವರ ಪಾಲಿನ ಪಂಚಾಮೃತವನ್ನು ಅರ್ಪಿಸಿದರೆ ಆ ದೇವರು ನಿಜವಾಗಿಯೂ ಮೆಚ್ಚುವುದರಲ್ಲಿ ಯಾವುದೇ ಸಂಶಯ ಇರದು . ದೇವರ ಪುಸ್ತಕದಲ್ಲಿ ನಮ್ಮ ಒಳ್ಳೆಯ ನಡತೆಗೆ ಖಂಡಿತಾ ಪುರಸ್ಕಾರ ಸಿಕ್ಕೇ ಸಿಗುತ್ತದೆ. ಇಲ್ಲವಾದಲ್ಲಿ ನೆಮ್ಮದಿಯ ಗಿಡವು ತಾನಾಗಿ ಹಸಿರುಕ್ಕಿಸುತ್ತದೆ. ಇದಕ್ಕಿಂತ ಬೇರೆ ಭಾಗ್ಯ ಏನಿದೆ?

ಕೆಲವರು ತಮಗೆ ಕಷ್ಟವಿದೆಯೆಂದು ಯಾವಾಗಲೂ ಅಲವತ್ತುಕೊಳ್ಳುತ್ತಿರುತ್ತಾರೆ. ಮಾಡುವ ಕೆಲಸವನ್ನೇ ಕಷ್ಟವೆಂದರೆ ಹೇಗೆ ? ಪರಮಾತ್ಮ ಕೊಟ್ಟ ಈ ಭೂಮಿ ಮೇಲಿನ ಋಣ ಭಾರ ಕಡಿಮೆ ಯಾಗಬೇಕಾದರೆ ಕೊಂಚ ಸದ್ಭುದ್ದಿ ಬೆಳೆಸಿಕೊಳ್ಳಬೇಕು. ಅನ್ಯರ ಪಾಲಿನ ಗಳಿಕೆಯನ್ನು ತಾವಾಗಿ ಕೊಟ್ಟು ಋಣ ಭಾರ ಕಡಿಮೆ ಮಾಡಿಕೊಳ್ಳಬೇಕು. ಅವರಿಗೂ ಕೇಳಲು ಸಂಕೋಚ ಇರಬಹುದು. ಹಾಗೆಂದು ಅವರಿಗೆ ಕಷ್ಟಗಳೇ ಇಲ್ಲವೆಂದು ಭಾವಿಸುವುದು ತಪ್ಪು. ಹೂ ಕೊಡುವಲ್ಲಿ ಹೂವಿನ ಎಸಳು ಕೊಟ್ಟರೂ ದೇವರು ಸ್ವೀಕರಿಸುತ್ತಾನೆ. ಹಾಗೆಯೇ ಇದೂ ಎಂದು ಭಾವಿಸಿ ಕೊಡುವುದರಲ್ಲಿದೆ ಹಿರಿವಂತಿಕೆ. ಇಲ್ಲದಿದ್ದಲ್ಲಿ ಅವರ ಮನದ ವೇದನೆ ತಟ್ಟದೇ ಇರಲಾರದು. ಹಾಗೆಂದು ಕೆಲವರು ಎಷ್ಟೇ ಕಷ್ಟಗಳಿದ್ದರೂ ತಮ್ಮ ಕಷ್ಟವನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದೇ ಇಲ್ಲ ಎಂದ ಮಾತ್ರಕ್ಕೆ ಅವರಿಗೆ ಕಷ್ಟವಿಲ್ಲವೇ ಇಲ್ಲ ಎಂದು ಭಾವಿಸುವುದು ತಪ್ಪು.

ಮನುಷ್ಯರೆಂದ ಮೇಲೆ ಎಲ್ಲರಿಗೂ ಕಷ್ಟಗಳು ಬರುತ್ತವೆ. ಆದರೆ ಅದನ್ನು ಸರಿದೂಗಿಸಿಕೊಂಡು ಹೋಗುವುದರಲ್ಲಿದೆ ಚತುರತೆ. ಕಷ್ಟ ಕಳೆದಾಗ ಸಿಗುವ ಅನುಭವವೇ ಸುಖ. ಹಾಗೆ ಸುಖ ಬಂದಾಗ ಅದಕ್ಕೊಂದು ವಿಶೇಷ ಮನ್ನಣೆ ಸಿಗುತ್ತದೆ. ಬದುಕಿನ ಪಯಣದಲ್ಲಿ ದುಡ್ಡಿಗೋಸ್ಕರ ಎಂತಹ ಕೀಳು ಮಟ್ಟಕ್ಕೂ ಇಳಿಯುವ ಅದೆಷ್ಟೋ ಮನಸ್ಸುಗಳಿದ್ದಾವೆ. ಆ ಮನಸ್ಸನ್ನು ಹತ್ತಿಕ್ಕಿಕೊಳ್ಳಲು ಯೋಗ ಧ್ಯಾನಗಳಂತಹ ಸಲಕರಣೆಗಳು ಅತ್ಯಗತ್ಯವೆನಿಸಿವೆ. ಅಂತರಾತ್ಮದೊಳಗೆ ಆತ್ಮನನ್ನು ಆವಾಹಿಸಿಕೊಂಡು ಮುನ್ನಡೆಯುವ ಕೆಲಸ ಒಂದು ದಿನದಲ್ಲಿ ಆಗುವಂತಹದ್ದಲ್ಲ. ಅದಕ್ಕೆ ಪ್ರತಿ ದಿನದ ಅರ್ಧ ಅಥವಾ ಒಂದು ಗಂಟೆ ಮೀಸಲು ಇರಿಸಿದರೆ ಸಾಕು.

ಕೋಟಿ ಇದ್ದರೂ ಸಿಗದ ನೆಮ್ಮದಿ ಆದರಲ್ಲಿ ದೊರಕುವುದು. ಕೇವಲ ಬಾಹ್ಯ ಪ್ರಪಂಚ ಮಾತ್ರ ಅಲ್ಲ.ಅದಕ್ಕೂ ಮಿಗಿಲಾದ ಬಲು ವಿಶಾಲವಾದ ಆಂತರಿಕ ಪ್ರಪಂಚವನ್ನು ನೋಡುವ ಕಾತರ ನಮ್ಮದಾಗಬೇಕು. ಅಲ್ಲಿನ ಭಾವನೆ ನೆಮ್ಮದಿ ಅಂತ:ಸತ್ವ ಹೊರಗಿನ ಯಾವ ಐಸಿರಿಯೂ ತಂದುಕೊಡಲಾರದು. ಇಷ್ಟು ವರ್ಷಗಳ ವ್ಯಯ ಬಲು ದೊಡ್ಡ ನಷ್ಟವೇ ಎಂದು ಭಾವಿಸಿ ಇನ್ನಾದರೂ ಆಂತರಿಕ ಸಿರಿಯನ್ನು ಅಪ್ಪುವ ಒಪ್ಪುವ ಮನ ಮಾಡಬೇಕಾಗಿದೆ. ಅದಕ್ಕೆ ಯಾವ ಮೋಹ ಪಾಶಗಳ ಅಗತ್ಯವೂ ಇಲ್ಲ. ಬರಿಯ ದೇವರನ್ನು ಅನುಭವಿಸುವ ಕಾರ್ಯ ಅಷ್ಟೇ. ತೃಣವೂ ಬೇಡ. ಮನವೊಂದಿದ್ದರೆ ಸಾಕು. ಒಳಗನ್ನು ಅರಿತಾಗ ಜೀವನ ಸುಭದ್ರವೇ. ಯಾವ ಭಯವೂ ಇರದ ಆ ಭಾವ ಭಕ್ತಿಗೊಂದು ದಿನವೂ ತಗ್ಗಿ ಬಗ್ಗಿ ನಮಸ್ಕಾರ.

✍️ ಮಲ್ಲಿಕಾ ಜೆ ರೈ ಪುತ್ತೂರು
ಲೇಖಕರು
ದರ್ಬೆ ಅಂಚೆ.574202 ದಕ.

- Advertisement -

Related news

error: Content is protected !!