ಸುಳ್ಯ: ತನ್ನನ್ನು ಮತಾಂತರಗೈದು ಮದುವೆಯಾಗಿ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಬೆಂಗಳೂರು ಮೂಲದ ಯುವತಿ, ಯುವಕನ ಮನೆಯ ಜಗಲಿಯಲ್ಲಿ ಕೂತು ಪ್ರತಿಭಟನೆ ನಡೆಸುತ್ತಿರುವ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಹಿಳೆ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದು ಕಟ್ಟೆಕ್ಕಾರ್ ಅಬ್ದುಲ್ಲಾ ಎಂಬವರ ಮನೆಯಲ್ಲಿ ನ್ಯಾಯಕ್ಕಾಗಿ ಧರಣಿ ಕೂತಿದ್ದಾರೆ. ಮನೆಮಂದಿ ಬೀಗ ಹಾಕಿ ಬೇರೆಡೆ ಹೋಗಿದ್ದು ಯುವತಿ ಪೊಲೀಸ್ ರಕ್ಷಣೆಯಲ್ಲಿದ್ದಾರೆ. ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಎಂಬಾತ ತನ್ನನ್ನು ಮದುವೆಯಾಗಿದ್ದು ಅವನೊಂದಿಗೆ ಮತ್ತೆ ನನ್ನನ್ನು ಸೇರಿಸಬೇಕು ಎಂದು ಕೇಳಿಕೊಂಡು ಎರಡು ವಾರದ ಹಿಂದೆ ಬೆಂಗಳೂರಿನ ಆಸಿಯಾ ಎಂಬ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಮತ್ತು ಮನೆಯವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಮಹಿಳೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಖಲೀಲ್ ಹೇಳಿಕೆ ನೀಡಿ ಆಕೆಯನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು.
ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಆಸಿಯಾ, ಸುಳ್ಯದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ಇಚ್ಛೆಯ ಮೇರೆಗೆ ವಿವಾಹಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 12.7.2017ರಲ್ಲಿ ಇಬ್ರಾಹಿಂ ಖಲೀಲ್ ರವರನ್ನು ವಿವಾಹವಾಗಿರುತ್ತೇನೆ. 15.1.2020ರವರೆಗೆ ನಮ್ಮ ಕೌಟುಂಬಿಕ ಜೀವನವು ಕೌಟುಂಬಿಕ ಜೀವನವು ಚೆನ್ನಾಗಿಯೇ ಇತ್ತು. ಸುಳ್ಯಕ್ಕೆ ಬಂದ ನಂತರ ಖಲೀಲ್ ರವರು ನನ್ನೊಂದಿಗೆ ಸಂಪೂರ್ಣವಾಗಿ ಸಂಬಂಧವನ್ನು ಬಿಟ್ಟಿರುತ್ತಾರೆ. ಪತಿಯ ಮನೆಯವರು ಕೂಡ ಅವರಿಗೆ ಸಹಕಾರ ನೀಡುತ್ತಿರುವುದರಿಂದ ನಾನು ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ಕಳೆದುಕೊಳ್ಳುವಂತಾಗಿದೆ ಎಂದು ದೂರು ನೀಡಿದ್ದಾರೆ.