Saturday, May 4, 2024
spot_imgspot_img
spot_imgspot_img

ಕೆಡ್ಡಸ: ಇದು ಭೂಮಿ ತಾಯಿಗೆ ನಮಿಸುವ ದಿವಸ

- Advertisement -G L Acharya panikkar
- Advertisement -
vtv vitla

ಭಾರತ ಧಾರ್ಮಿಕ ನಂಬಿಕೆಗಳ ಆವಾಸ ಸ್ಥಾನ. ಇಲ್ಲಿನ ಜನರ ಪ್ರತೀ ದಿನಚರಿಯಲ್ಲೂ, ಆಚರಣೆಯಲ್ಲೂ ನಂಬಿಕೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಬೆಳಿಗ್ಗೆ ಹಾಸಿಗೆ ಬಿಡುವಲ್ಲಿಂದ ಹಿಡಿದು, ರಾತ್ರಿ ನಿದ್ರಾದೇವಿಗೆ ಶರಣಾಗುವಲ್ಲಿಯವರೆಗೆ ಪ್ರತೀ ಕ್ಷಣವೂ ಒಂದೊಂದು ಪದ್ದತಿ, ಸಂಪ್ರದಾಯ ಭಾರತೀಯರನ್ನು ನಂಬಿಕೆಯೊಳಗೆ ಬಂಧಿಸುತ್ತದೆ. ಜನರ ಪ್ರತೀ ಆಚರಣೆಗಳೂ ನಂಬಿಕೆಯ ನೆಲೆಗಟ್ಟಿನಲ್ಲಿಯೇ ರಚನೆಗೊಳ್ಳುತ್ತವೆ.


ಭಾರತೀಯರು ಪ್ರಕೃತಿಯ ಆರಾಧಕರು ಎಂಬುದು ವೇದ ಪುರಾಣಗಳ ಕಾಲದಿಂದಲೇ ನಡೆದು ಬಂದ ಸಂಗತಿ. ಪುರಾಣ ಕಥನಗಳಲ್ಲಿ, ವೇದ ಶಾಸ್ತ್ರಗಳಲ್ಲಿ ಪ್ರಕೃತಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ನಡೆವ ನೆಲ, ಬೀಸುವ ತಂಗಾಳಿ, ಹರಿವ ನೀರು, ಉರಿವ ಬೆಂಕಿ, ಸುರಿವ ಮಳೆ ಈ ಪಂಚಭೂತಗಳಿಗೆ ದೈವೀ ಸ್ಥಾನವನ್ನೇ ಕೊಟ್ಟವರು ನಮ್ಮ ಪೂರ್ವಜರು. ಆದ್ದರಿಂದ ಇವುಗಳ ಆರಾಧನೆ ನಿರಂತರವಾಗಿ ನಡೆದು ಬಂದಿದೆ.

ಭಾರತದ ಹಲವು ಪ್ರದೇಶಗಳಲ್ಲಿ ಆಚರಣೆಗಳು ವಿಭಿನ್ನ. ವಿವಿಧತೆಯಲ್ಲಿ ಏಕತೆ ಸಾರುವ ದೇಶವಲ್ಲವೇ? ಆದ್ದರಿಂದ ಆಚರಣೆಗಳೂ ಹಲವಾರು ವಿಧ, ವಿಭಿನ್ನ. ಅದರಲ್ಲೂ ನಮ್ಮ ತುಳುನಾಡಿನ ಸಂಪ್ರದಾಯ ಎಲ್ಲವುಗಳಿಂದ ಹಿರಿದಾದುದು ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿ ಹುತ್ತದ ಮಣ್ಣು, ನಾಗನಡೆ, ಭೂಮಿದೇವಿ, ಭೂತಾರಾಧನೆಗೆ ಅದರದ್ದೇ ಆದ ಸ್ಥಾನಮಾನ. ಹೇಳಿ ಕೇಳಿ ಇದು ಪರಶುರಾಮ ಸೃಷ್ಟಿ. ಇಲ್ಲಿ ನಂಬಿಕೆ, ಆರಾಧನೆಗೆ ಪ್ರಾಧಾನ್ಯತೆ ಜಾಸ್ತಿ.

ಭೂಮಿದೇವಿಗೆ ಎಣ್ಣೆ ಬಿಡುವ ಕ್ರಮ
ತುಳುವರ ಆಚರಣೆಗಳಲ್ಲಿ ಭೂಮಿತಾಯಿಯನ್ನು ಸಾಕ್ಷಾತ್ ದೇವೀ ರೂಪದಲ್ಲಿ ಕಾಣುವುದು ವಿಶಿಷ್ಟ. ಭೂಮಿಯನ್ನು ಹೆಣ್ಣು ಯಾವ ರೀತಿ ಬೆಳೆದು ದೊಡ್ಡವಳಾಗಿ ಫಲವೀಯುತ್ತಾಳೋ ಹಾಗೆಂದೇ ಆಚರಣೆಯನ್ನೂ ಮಾಡುತ್ತಾರೆ. ಈ ಆಚರಣೆಗಳು ಹಬ್ಬವಾಗಿ ಪರಿವರ್ತಿತವಾಗಿವೆ ಮತ್ತು ಅವುಗಳ ಆರಾಧನೆಗೆಂದೇ ದಿನಗಳನ್ನೂ ಹಿರಿಯರು ನಿಗದಿಪಡಿಸಿರುವುದು ವಿಶೇಷ. ಅಂತಹ ಹಬ್ಬಗಳಲ್ಲಿ ಕೆಡ್ಡಸವೂ ಒಂದು. ಮಕರ ಮಾಸದ ಕೊನೆಯ ಮೂರು ದಿನಗಳು ಅಂದರೆ ತುಳು ತಿಂಗಳಿನ ಪೊನ್ನಿ 27,28,29 ಕೆಡ್ಡಸ ಹಬ್ಬದ ಆಚರಣೆ ನಡೆಯುತ್ತದೆ. ಈ ಮೂರು ದಿನಗಳಲ್ಲಿ ಮೊದಲ ದಿನ ಭೂದೇವಿ ಋತುಮತಿಯಾಗುವುದಾಗಿ ತುಳುವರ ನಂಬಿಕೆ. ಈ ದಿನಗಳಂದು ಕೆಡ್ಡಸದ ನಂತರ ಬೆಳೆ ಕಟಾವಿಗೆ ಬರುತ್ತದೆ. ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು. ಪ್ರಕೃತಿ ಮುಂದಿನ ಸೃಷ್ಟಿಗೆ ಸಜ್ಜಾಗುತ್ತಾಳೆ. ಹಾಗಾಗಿ ಈ ಮೂರು ದಿನಗಳು ಭೂಮಿ ತಾಯಿಗೆ ವಿಶ್ರಾಂತಿ. ಹಾಗೆಯೇ ಕೃಷಿಕರ ವಿಶ್ರಾಂತಿಯ ಅಗತ್ಯವನ್ನೂ ಪೂರೈಸುತ್ತದೆ. ಮೊದಲ ದಿನ ಕೃಷಿ ಸಂಬಂಧಿ ಪರಿಕರಗಳನ್ನು ತೊಳೆದು ಪೂಜಿಸಿ ತೆಗೆದಿಡುತ್ತಾರೆ. ಮನೆಯ ಸುತ್ತಮುತ್ತಲನ್ನ ಸ್ವಚ್ಛಗೊಳಿಸಲಾಗುತ್ತದೆ. ನಡುಕೆಡ್ಡಸದ ದಿನ ಕುಸುಲಕ್ಕಿಯನ್ನು ಬಳಸಿ ಮಾಡಲಾಗುವ ತಿಂಡಿ ನನ್ನೆರಿಯೇ ಮುಖ್ಯ ನೈವೇದ್ಯ . ಕುಸುಲಕ್ಕಿಯನ್ನು ಹುರಿದು ಹುಡಿ ಮಾಡಿ ಅದಕ್ಕೆ ಬೆಲ್ಲ, ಬಾಳೆಹಣ್ಣು, ತುಪ್ಪ ಸೇರಿಸಿ ಎಲ್ಲರ ಮನೆಯಲ್ಲೂ ಸೇವಿಸುವುದು ವಿಶೇಷ.

ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡಿ, ದೀಪ ಬೆಳಗುತ್ತಾಳೆ. ಒಂದು ಕಲಶದಲ್ಲಿ ನೀರು, ಬಾಳೆಎಲೆಯಲ್ಲಿ ಸೀಗೆ, ಅಂಟುವಾಳಕಾಯಿ, ಕನ್ನಡಿ, ಬಾಚಣಿಗೆ, ಬೊಟ್ಟು, ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ ಭೂಮಿಗೆ ಎಣ್ಣೆ ಬಿಟ್ಟು ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌ ನಮಸ್ಕರಿಸುತ್ತಾಳೆ. ಭೂಮಿತಾಯಿ ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು.

ಕೆಡ್ಡಸದ ಇನ್ನೊಂದು ವಿಶೇಷತೆ ಬೇಟೆ. ಕೃಷಿ ಉತ್ಪನ್ನಗಳು ಕೈ ಸೇರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಉಪಟಳವೂ ಜಾಸ್ತಿಯಾಗಿರುತ್ತದೆ. ಹಾಗಾಗಿ ಅವುಗಳ ನಿಯಂತ್ರಣಕ್ಕಾಗಿ ಬೇಟೆಯ ಅನಿವಾರ್ಯತೆ. ಕೆಲವು ಮನೆಗಳಲ್ಲಿ ಮಾಂಸಾಹಾರ ಈ ದಿನಗಳಲ್ಲಿ ಕಡ್ಡಾಯ. ಮಾಂಸ ತಿನ್ನದಿದ್ದರೆ ಮೂಳೆ ಬಲಹೀನವಾಗುತ್ತದೆ ಎಂಬ ನಂಬಿಕೆಯೂ ಇದೆ. ಸಸ್ಯಾಹಾರಿಗಳು ವಿಶೇಷ ಅಡುಗೆಗಳನ್ನು ಮಾಡುತ್ತಾರೆ. ಕೆಡ್ಡಸದ ದಿನಗಳಲ್ಲಿ ಹಸಿ ಕಡಿಯಬಾರದು. ಒಣಗಿದ್ದನ್ನು ಮುರಿಯಬಾರದು, ಭೂಮಿ ಅಗೆಯಬಾರದು ಎಂಬ ನಂಬಿಕೆಗಳಿವೆ. ಯಾಕೆಂದರೆ ಭೂಮಿ (ಹೆಣ್ಣು) ಋತುಮತಿಯಾದಾಗ ಆಕೆಯ ಕೈಯಲ್ಲಿ ಯಾವುದೇ ಕೆಲಸ ಮಾಡಿಸಬಾರದು ಎಂಬ ಸಂದೇಶವದು. ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಭೂಮಿಯ ಮೇಲಿನ ಶ್ರದ್ದೆ ನಂಬಿಕೆಗಳು ಇನ್ನಷ್ಟು ಫಲ ನೀಡುವಲ್ಲಿ ಸಹಕಾರಿ. ಆದರೆ ಇತ್ತೀಚಿಗೆ ಈ ನಂಬಿಕೆಗಳಿಗೆ ಮೂಲಾಚರಣೆಗಳಿಗೆ ಧಕ್ಕೆಯಾಗುತ್ತಿರುವುದು ವಿಷಾಧಕರ. ಆದ್ದರಿಂದಲೇ ಪ್ರಕೃತಿಯಲ್ಲಿ ವೈಪರೀತ್ಯಗಳು ಜಾಸ್ತಿಯಾಗುತ್ತಿರುವುದೇನೋ…. ಇರುವುದೊಂದೇ ಭೂಮಿ, ಉಳಿಸಿಕೊಂಡರೆ ನಮ್ಮನ್ನೂ ಉಳಿಸಿತು.

- Advertisement -

Related news

error: Content is protected !!