Thursday, March 28, 2024
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ

- Advertisement -G L Acharya panikkar
- Advertisement -

ಒಡಿಯೂರು ಶ್ರೀ , ಪತ್ರಕರ್ತ ಶ್ರೀಕಾಂತ್ ಶೆಟ್ಟಿ, ಡಾ|ಸುರೇಶ್‌ ಪುತ್ತೂರಾಯ ಇವರ ನೇತೃತ್ವದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ

ವಿಟ್ಲ: ಸುಬ್ರಹ್ಮಣ್ಯ ದೇವರು ಎಲ್ಲದಕ್ಕೂ ಅಧಿಪತಿ. ಕೋಲ್ಪೆಯ ಜನರು ಧರ್ಮಸೇನಾನಿಗಳು. ಇಲ್ಲಿನ ಜನರ ನಡೆನುಡಿ ಅದು ಆದರ್ಶವಾಗಬೇಕು. ನಮ್ಮ ಶ್ರದ್ದಾಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಕೆಲಸವಾಗಬೇಕು. ಬಂಧನ, ಬಿಡುಗಡೆಗೆ ಮನಸ್ಸು ಕಾರಣ. ಭಾರತದಲ್ಲಿ ಆದ್ಯಾತ್ಮದ ತಿರುಳಿದೆ.
ಅಷ್ಟರಾಗಗಳನ್ನು ಮೀರಿದಾಗ ಅಂತರಂಗದಲ್ಲಿ ಪ್ರೀತಿ ವಿಶ್ವಾಸ ತುಂಬುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.೩ರಿಂದ ಜ.೮ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.೫ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಶ್ರದ್ಧಾಕೇಂದ್ರಗಳು ಬದುಕಿಗೆ ದಿಕ್ಕು ತೋರಿಸುತ್ತದೆ. ಜೀವನ ಪಯಣದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳು ದಾರಿದೀಪ. ಧರ್ಮ ಶ್ರದ್ಧೆ ಎಲ್ಲರಲ್ಲೂ ಬರಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಇತಿ ಮಿತಿಯ ಮಾತು ನಮ್ಮಲ್ಲಿದ್ದಾಗ ಬದುಕು ಹಸನಾಗುತ್ತದೆ. ಸ್ವಚ್ಚತೆಗೆ, ಶಿಸ್ತಿಗೆ ಇಲ್ಲಿ ಆದ್ಯತೆ ನೀಡಲಾಗಿದೆ. ಸ್ವಚ್ಚಭಾರತಕ್ಕೆ ಇಲ್ಲಿ ಪ್ರಧಾನ್ಯತೆ ನೀಡಲಾಗಿದೆ. ಮೇಲು ಕೀಳೆಂಬ ಭಾವ ತೊರೆದು ಬದುಕುವ ಮನಸ್ಸು ನಮ್ಮದಾಗಬೇಕು. ಭಕ್ತಿ ಎಂಬ ಭಾವುಕತೆಯಲ್ಲಿ‌ ನಾವು ಮುಂದುವರೆಯಬೇಕು ಎಂದರು.

ಪತ್ರಕರ್ತ ಶ್ರೀಕಾಂತ್ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಿ ಗ್ರಾಮವನ್ನು ಹೇಗೆ ವಿಕಾಸ ಮಾಡಬಹುದೆನ್ನುವುದನ್ನು ತೋರಿಸಿ ಕೊಟ್ಟ ಗ್ರಾಮ ಇಡ್ಕಿದು. ಸಂಘದ ಚಿಂತನೆಯನ್ನು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯ ಕೂಡ ಈ ಕ್ಷೇತ್ರದ ಮೂಲಕ ಆಗಿದೆ. ಜನಜೀವನಕ್ಕೆ ಪುರಾಣಗಳು ಬಹಳಷ್ಟು ಹತ್ತಿರವಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮೇಲಿನ ದಾಳಿ ಕೊನೆಯಾಗದು. ದೇವದುರ್ಲಭ ಕಾರ್ಯಕರ್ತರು ಈ ಭಾಗದಲ್ಲಿ ಹೆಚ್ಚಿದ್ದಾರೆ. ಬದುಕನ್ನು ಬದಲಾಯಿಸಲು ತ್ಯಾಗಪೂರ್ಣ ಸೇವೆ ಅಗತ್ಯ.
ಸಮಾಜದಲ್ಲಿ ಸರಳವಾಗಿ ಬದುಕಿದವರು ಪ್ರಾಥಸ್ಮರಣೀಯರು. ನಮ್ಮವರ ದೌರ್ಬಲ್ಯದಿಂದ ನಮ್ಮವರಿಗೇ ಅಪಾಯಗಳೇ ಹೆಚ್ಚು. ಹಿಂದೂ ಪರಂಪರೆಯನ್ನು ಉಳಿಸಲು ನಾವು ಜಗೃತರಾಗಬೇಕು ಎಂದರು.

ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ|ಸುರೇಶ್‌ ಪುತ್ತೂರಾಯರವರು ಮಾತನಾಡಿ ದೇವಾಲಯಗಳು ಶ್ರದ್ದಾಕೇಂದ್ರಗಳು. ದೇವಾಲಯಗಳು ನಮ್ಮ ಧರ್ಮದ ಶಕ್ತಿ ಕೇಂದ್ರಗಳಾಗಬೇಕು. ದೇವಾಲಯದಲ್ಲಿ ಪೂಜಾ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳು ನಡೆಯಬೇಕು. ಆಗ ನಮ್ಮ ಹಿಂದೂ ಸಮಾಜ ಒಗ್ಗಟ್ಟಾಗುತ್ತದೆ. ನಮ್ಮ ದೇಶ ಬಲಿಷ್ಟ ರಾಷ್ಟ್ರವಾಗಲು ಭಾರತೀಯತೆ ಹಾಗೂ ಹಿಂದೂ ರಾಷ್ಟ್ರೀಯತೆ ಒಂದೇ ಆಗಬೇಕು. ಎಲ್ಲಾ ಧರ್ಮದವರು ಸಾಮರಸ್ಯದಿಂದ ಬೆಳೆಯುವ ರಾಷ್ಟ್ರ ನಮ್ಮದಾಗಬೇಕು ಎಂದರು.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ರವರು ಅಧಕ್ಷತೆ ವಹಿಸಿ ಮಾತನಾಡಿ ಕ್ಷೇತ್ರದ ದೇವರ ಮಹಿಮೆ ಅಪಾರವಾಗಿದೆ. ನಾವು ಕೇವಲ ನೆಪ ಮಾತ್ರ ನಮ್ಮನ್ನು ನಡೆಸುತ್ತಿರುವವರೆಲ್ಲ ಷಣ್ಮುಖ ಸುಬ್ರಹ್ಮಣ್ಯ ದೇವರು. ಕ್ಷೇತ್ರದ ಅಭಿವೃದ್ಧಿ ಯಲ್ಲಿ ಹಲವರು ಸಹಕಾರ ನೀಡಿದ್ದಾರೆ ಅವರೆಲ್ಲರಿಗೆ ನಾವು ಅಭಾರಿಯಾಗಿದ್ದೇವೆ‌. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ವೇದಮೂರ್ತಿ ಶ್ರೀಧರ ಭಟ್ ಕಬಕ, ಕುಮುಟಾ ಠಾಣಾ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಪುತ್ತೂರು ಪೆಟ್ರೋ ಕೆಮಿಕಲ್ ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಉದಯ ಭಟ್, ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಜಗದೀಶ್ ದೇವಸ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಸರು, ಸೀತಾ ಮಡಿವಾಳ, ಸಂಕಪ್ಪ ಸಪಲ್ಯರವರನ್ನು ಗೌರವಿಸಲಾಯಿತು.

ಆಶಿಕಾ, ಪ್ರಜ್ಞಾ, ಲಾವಣ್ಯ ಪ್ರಾರ್ಥಿಸಿದರು.
ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ಚಂದ್ರಶೇಖರ ಕೊಪ್ಪಳ ವಂದಿಸಿದರು. ನವೀನ್ ಮಂಡ್ರಬೈಲು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!