Tuesday, April 30, 2024
spot_imgspot_img
spot_imgspot_img

ಕೋವಿಡ್-19 ಪ್ರಕರಣ ತೀವ್ರ ಹೆಚ್ಚಳ – ಹಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

- Advertisement -G L Acharya panikkar
- Advertisement -

ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇದೀಗ ಹಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಭೆಯನ್ನು ನಡೆಸಿದ್ದು, ಕೋವಿಡ್-19 ಕೇಸ್‌ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಾಗರೂಕರಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಏಪ್ರಿಲ್ 10 ಹಾಗೂ 11 ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಅಣುಕು ಡ್ರಿಲ್ ನಡೆಸುವಂತೆ ಆರೋಗ್ಯ ಮಂತ್ರಿಗಳನ್ನು ಕೇಳಿಕೊಂಡಿದ್ದಾರೆ. ಮಾತ್ರವಲ್ಲದೇ ಕೋವಿಡ್ ಟೆಸ್ಟ್‌ಗಳನ್ನು ಹೆಚ್ಚಿಸುವಂತೆ ಮತ್ತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿದ್ದಾರೆ.

ಇದೀಗ ಕೋವಿಡ್ ಕೇಸ್‌ಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಹಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹರ್ಯಾಣ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ. ಇದನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತ ಮತ್ತು ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.

ಕೇರಳದಲ್ಲಿ ಗರ್ಭಿಣಿಯರು, ವೃದ್ಧರು ಮತ್ತು ಅನಾರೋಗ್ಯಕ್ಕೊಳಗಾದವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೋವಿಡ್ ಸಂಬಂಧಿತ ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮತ್ತು ಮಧುಮೇಹದಂತಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ವರದಿಯಾಗಿವೆ ಎಂದು ಹೇಳಿದರು. ಆರೋಗ್ಯ ಇಲಾಖೆಗೆ ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದು, ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳ ವಿಶೇಷ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪುದುಚೇರಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆ, ಹೋಟೆಲ್, ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ಆತಿಥ್ಯ ಮತ್ತು ಮನರಂಜನಾ ವಲಯಗಳು, ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!