

ಧಾರವಾಡ: ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳ 4 ಅಂಗಡಿಗಳ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಕಲ್ಲಂಗಡಿ ಹಣ್ಣು, ತೆಂಗಿನಕಾಯಿಗಳನ್ನು ರಸ್ತೆಯಲ್ಲಿ ಒಡೆದು ಹಾಕಿ ದಾಂಧಲೆ ನಡೆಸಿದ್ದಾರೆ.

ಇದೇ ಸ್ಥಳದಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಎಂಬುವವರ ಅಂಗಡಿ ಸೇರಿದಂತೆ ಇತರೆ ನಾಲ್ಕು ಅಂಗಡಿಗಳಿಗೆ ಹಾನಿಮಾಡಲಾಗಿದೆ. ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣು , ತೆಂಗಿನಕಾಯಿ ಒಡೆದು ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಕಳೆದ 15 ದಿನಗಳ ಹಿಂದೆ ಶ್ರೀ ರಾಮಸೇನಾ ಕಾರ್ಯಕರ್ತರು ಆವರಣದಲ್ಲಿ ಹಿಂದೂಯೇತರ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ್ದ ದೇವಸ್ಥಾನದ ಆಡಳಿತ
ಮಂಡಳಿ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಭರವಸೆ ನೀಡಿತ್ತು . ಆದರೆ, ಈ ಕುರಿತು ದೇವಸ್ಥಾನ ಸಮಿತಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏಕಾಏಕಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿ ಕೇರಿಗೆ
ಬಂದು ಮುಸ್ಲಿಂ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಬಿಸಾಬ್ ಒಟ್ಟು 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ತಂದಿದ್ದೆವು. ಅದರಲ್ಲಿ ಒಂದು ಕ್ವಿಂಟಾಲ್ ಮಾರಾಟವಾಗಿತ್ತು . ಉಳಿದ 5 ಕ್ವಿಂಟಾಲ್ ರಸ್ತೆ ಗೆ ಚೆಲ್ಲಿ ಚೂರು ಚೂರು ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದರು.










