

ನಾಗಮಂಗಲ: ಬಸ್ಸು ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಮೂಲದ ನವ ದಂಪತಿಗಳ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜ. 2 ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಗೇಟ್ ಬಳಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಕಾರಿನಲ್ಲಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕುಂದಳ್ಳಿ ಗ್ರಾಮದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಎನ್ನಲಾಗಿದೆ. ಕಾರಿನಲ್ಲಿದ್ದ ಇನ್ನೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ಇತರ ನಾಲ್ವರು ಕೂಡ ಗಾಯಗೊಂಡಿದ್ದಾರೆ.

ಮೃತ ಸುದೀಪ್ ಹಾಗೂ ಶ್ರೀಜಾ ಅವರು 20 ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಜ. 2 ರಂದು ಅಮಾವಾಸ್ಯೆ ಹಿನ್ನಲೆಯಲ್ಲಿ ನವದಂಪತಿ ಕುಟುಂಬ ಸಮೇತರಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಮುಗಿಸಿ ವಾಪಸ್ಸು ಸೋಮವಾರ ಪೇಟೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕೆಂಪನಕೊಪ್ಪಲು ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರು ಮಾರ್ಗವಾಗಿ ಸೋಮವಾರ ಪೇಟೆ ಕಡೆಗೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ಬಗ್ಗೆ ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


