Sunday, May 5, 2024
spot_imgspot_img
spot_imgspot_img

ಪರಮಗತಿಯ ಹೊಂದುವಿಕೆಗೆ ಆದರ್ಶಗಳ ಹೆಜ್ಜೆ – ಮಲ್ಲಿಕಾ ಜೆ ರೈ ಪುತ್ತೂರು

- Advertisement -G L Acharya panikkar
- Advertisement -
vtv vitla

ಕಿಂ ಪುನರ್ಬ್ರಾಹ್ಮಣಾ: ಪುಣ್ಯಾ:
ಭಕ್ತಾ ರಾಜರ್ಷಯಸ್ತಥಾ |
ಅನಿತ್ಯಮಸುಖಂ ಲೋಕಮ್
ಇಮಂ ಪ್ರಾಪ್ಯ ಭಜಸ್ವ ಮಾಮ್ ||09-33||

ಪುಣ್ಯಾತ್ಮರಾದ ಬ್ರಾಹ್ಮಣರ ಬಗ್ಗೆ, ಭಕ್ತರ ಬಗ್ಗೆ ಹಾಗೂ ರಾಜರ್ಷಿಗಳ ಬಗ್ಗೆ ಹೇಳುವುದಾದರೂ ಏನಿದೆ? ನನ್ನಲ್ಲಿ ಶರಣಾಗಿ ಪರಮಗತಿಯನ್ನು ಪಡೆಯುತ್ತಾರೆ. ಹೀಗಾಗಿ ಸುಖರಹಿತವಾದ, ಕ್ಷಣ ಭಂಗುರವಾದ ಈ ಮನುಷ್ಯ ಶರೀರವನ್ನು ಪಡೆದುಕೊಂಡು, ಅನಿತ್ಯವೂ ದುಃಖಮಯವೂ ಆದ ಪ್ರಪಂಚವನ್ನು ಬಿಟ್ಟು ನನ್ನನ್ನು ಭಜಿಸುತ್ತಾ ಅನವರತ ಕೃತಕೃತ್ಯನಾಗು ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ.

ಚಿಂತೆ ಸದಾ ಇರುವಂತದ್ದೇ. ಚಿಂತಿಸದ ಹೊರತು ಬದುಕು ಸುಲಲಿತವಾಗಿ ಸಾಗುವುದರ ಬಗ್ಗೆ ಅನುಮಾನವೂ ಇದ್ದೇ ಇರುತ್ತದೆ. ನೂರು ಮೀಟರ್ ಗಳ ಪ್ರಯಾಣಕ್ಕೆ ನಾವು ಪ್ರಾರಂಭಿಸಿದೆವೆಂದಾದರೆ ಅದು ತಲುಪಲು ಬೇಕಾದ ವ್ಯವಸ್ಥೆಗಾದರೂ ಆಲೋಚಿಸಲೇಬೇಕು. ಇಲ್ಲವಾದಲ್ಲಿ ಆ ಕ್ಷಣಕ್ಕಾಗುವಾಗ ತಲುಪಲು ಅಸಾಧ್ಯವಾಗುವುದು. ಪೂರ್ವ ತಯಾರಿಯ ಬಳಿಕ ಹೊರಟಾಗಿನ ವೇಗ ಸಾಧಾರಣವಾಗಿದ್ದರೂ ಸಾಕು. ಆದರೆ ಅಂತಿಮ ಕಾಲಕ್ಕೆ ಪ್ರಾರಂಭ ಮಾಡಿ ಅತಿಯಾದ ವೇಗಕ್ಕೊಡ್ದುವುದು ತೀರಾ ಅಪಾಯವೇ ಹೌದು. ಹಾಗೂ ಅದು ತೀರಾ ಚಿಂತಾಕ್ರಾಂತರನ್ನಾಗಿಸುವುದೂ ಉಂಟು. ಹಾಗಾಗಿ ಸದಾ ಚಿಂತನಶೀಲವಾಗಿರುವ ಮನಸ್ಸಿನೊಂದಿಗೆ ನಗುವೆಂಬ ಆಭರಣವನ್ನು ದಿನವೂ ಧರಿಸಿಕೊಂಡಿರಲೇಬೇಕಾಗುತ್ತದೆ. ಸಾಧನೆಗೆ ‘ಸಾ’ಕ್ಷಿಯಾಗುವುದು ‘ಧ’ನಕನಕಗಳೊಂದಿಗೆ ‘ನೆ’ನಪುಗಳೂ ಕೂಡಾ ಮುಖ್ಯವಾಗುತ್ತವೆ. ಇಷ್ಟ ಬಂದ ಕಡೆ ಮನಸ್ಸನ್ನು ತಿರುಗಿಸಿದರೂ ಬುದ್ಧಿಯನ್ನು ಅದರ ಬೆನ್ನ ಹಿಂದೆಯೇ ಪ್ರವಹಿಸಬೇಕಾಗುತ್ತದೆ. ಜೀವನದ ಆಗುಹೋಗುಗಳಿಗೆ ಆಧಾರವಾದ ಬುದ್ಧಿಯನ್ನು ಗಮನಿಸದೇ ಮುಂದಡಿಯಿಟ್ಟರೆ ಕೆಲವೊಮ್ಮೆ ಇಟ್ಟ ಮುಂದಡಿಯನ್ನೇ ಹಿಂದಕ್ಕೆ ಇಡಬೇಕಾಗುತ್ತದೆ. ಅಂತಹ ಪ್ರಮೇಯವೂ ಬಂದೊದಗುತ್ತದೆ.

ಈ ಪ್ರಪಂಚದಲ್ಲಿ ಜನಿಸಿ ಬಂದ ಮೇಲೆ ಅಳು ಮುಖವನ್ನು ನಗುಮುಖದಡೆಗೆ ಪರಿವರ್ತಿಸುವುದು ಮುಖ್ಯ. ಸೂರ್ಯನ ಕಿರಣಗಳು ತಾನಾಗಿ ಭೂಮಿಗೆ ಸ್ಪರ್ಶಿಸಲು ಭೂಮಿಯೊಡಲು ಪುಳಕಗೊಳ್ಳುವಂತೆ ಮಗು ಹುಟ್ಟಿ ಬಂದಾಗ ತಾಯಿಯೊಡಲು ಹರ್ಷ ಚೈತನ್ಯದಿಂದ ಕೂಡುವುದು. ಮಡಿಲು ತುಂಬುವ ಸಂತಸ ಆ ಮಗುವಿನ ಬೆಳವಣಿಗೆಯ ಕಡೆಗೆ ನೆಟ್ಟ ನೋಟ ದಿನದಿಂದ ದಿನಕ್ಕೆ ಹೆಚ್ಚಾಗುವುದು. ಚಡಪಡಿಸಿದ ಕ್ಷಣಗಳು ಕಳೆದುಹೋಗಿ ಬದುಕು ಬಿಸಜಾಕ್ಷನನ್ನು ಸ್ತುತಿಸುವಂತೆ ಮಾಡುತ್ತದೆ. ಆತನು ದಯಾಮಯ. ಆತನಾ ನೆರಳು ಸದಾ ಪ್ರೇರಕ. ಬಳಲಿ ಹೋದ ಜೀವಕ್ಕೆ ದಾರಿಯಲ್ಲಿ ಮರ-ಗಿಡಗಳು ಆಸರೆಯಾಗುವುದು ಸಹಜ. ತಾಯಿ ಮಡಿಲನ್ನೇ ಬೆಂಕಿಯನ್ನಾಗಿಸುವ ಇಂದಿನ ಗತಿ ತೀರ ಅಮಾನವೀಯ. ದಾರಿಯುದ್ದಕ್ಕೂ ಗಿಡ ಮರಗಳು ತೂಗಿ ತೊನೆದಾಡಿಕೊಂಡಿದ್ದರೆ ಹಕ್ಕಿಗಳಿoಚರ ಕೇಳಿದ ಕರ್ಣಗಳು ಮನಸ್ಸನ್ನು ಸಂತಸವಾಗಿಡುವಲ್ಲಿ ಶ್ರಮಿಸುತ್ತವೆ. ಹಾಗಾಗಿ ಮನಸ್ಸು, ಪ್ರಕೃತಿ, ಉಸಿರು ಸದಾ ತಂಪಾಗಿರಲು ಬದುಕು ಎಷ್ಟು ಮಾತ್ರಕ್ಕೂ ಬೇಸರ ಪಡದು.

ಒಂದು ನಗು ನೂರು ಚಿಂತೆಗಳನ್ನು ಹೊಡೆದೋಡಿಸುತ್ತದೆ. ನಗುವನ್ನು ಸ್ವಾಗತಿಸುವುದು ಮುಖ್ಯವಾಗಬೇಕು. ಎಲ್ಲಿ ಚಿಂತೆ ಇದೆಯೋ ಅಲ್ಲಿ ನಗುವಿನ ಗುಳಿಗೆಯನ್ನು ಇರಿಸಬೇಕು. ಅದರ ಪರಿಮಳಕ್ಕೆ ಹೂವು ತನ್ನಷ್ಟಕ್ಕೆ ಅರಳಿ ತಾನು ನಗುತ್ತಿರುವಂತೆ ಭಾಸವಾಗುತ್ತದೆ. ನಗುವೆಂಬ ಬೆಳಕಿಗೆ ಎಲ್ಲರೂ ಎದ್ದು ಸಂಭ್ರಮ ಪಡುವಂತೆ ಅಳುವೆಂಬ ಕತ್ತಲಿಗೆ ಹಣತೆಯ ದೀಪದಷ್ಟಾದರೂ ಅರಳುವ ಅರಳಿಸುವ ಕಾರ್ಯ ಮಾಡಬೇಕು.

“ತಾನೊಂದು ನೆನೆದರೆ ದೈವವೊಂದು ಬಗೆಯಿತು” ಎಂಬಂತೆ ನಾವು ಮನದಲ್ಲಿ ಮೂಡಿಸಿದ ಒಂದು ಚಿಂತನೆ ಮೊಳಕೆಯೊಡೆದು ಬಂದ ಕಾಳಿನಂತೆ ನಾಜೂಕಾಗಿರುತ್ತದೆ. ಅದಕ್ಕೆ ಬಾಹ್ಯದಿಂದ ದೊರಕುವ ಮಣ್ಣು, ನೀರು, ಗಾಳಿ ಇವೇ ಮುಂತಾದ ಸುತ್ತಲಿನ ಪರಿಸರದ ಸ್ಪಂದನೆಯ ಮುಖಾಂತರ ಅದರ ಉಳಿವು ನಿರ್ಧಾರವಾಗುತ್ತದೆಯಾದರೂ ಸೃಷ್ಟಿಯ ರಹಸ್ಯ ಅದ್ಭುತವೇ ಹೌದು. ಹೀಗೆ ನಿರ್ಧಾರಗೊಂಡ ಯೋಚನೆಯು ಮೆಲ್ಲ ಮೆಲ್ಲನೆ ಕದ ತೆರೆದು ಒಂದೊಂದೇ ಎಲೆಗಳನ್ನು ಮೈಗೂಡಿಸಿಕೊಳ್ಳುವಂತೆ, ಮನಸ್ಸಿನ ಹತ್ತಾರು ಯೋಚನೆಗಳು ತೀವ್ರವಾಗಿ ಸಂದಿಗ್ಧಗೊಂಡು ಒಂದು ಒಳ್ಳೆಯ ಫಲಿತಾಂಶವನ್ನು ನೀಡಲು ಉತ್ಸುಕವಾಗುತ್ತವೆ. ಹಾಗಾಗಿ ಏಳುಬೀಳುಗಳ ಹೊಡೆತಕ್ಕೆ ಸಿಲುಕಿದ ಹಾಗೆ ಅನುಭವಗಳು ಪರಿಪಕ್ವತೆಯನ್ನು ಪಡೆದುಕೊಳ್ಳುತ್ತವೆ.


ಮನಸ್ಸಿನ ಗೋಡೆಯ ಮೇಲೆ ಬರೆದ ಚಿತ್ರಗಳು ಸುಂದರವಾಗಬೇಕಾದರೆ ಒಳ್ಳೆಯ ಆಲೋಚನೆಗಳು ಸೃಷ್ಟಿಯಾಗಬೇಕು. ಒಳಿತಿನ ಕುರಿತೇ ಚಿಂತಿಸಿ, ಅದರಿಂದ ಪ್ರೇರಿತರಾಗಿ ಉದ್ಭವಿಸಿದ ಮನದ ಯೋಚನೆಯು ಸಕಾರಾತ್ಮಕವೇ ಆಗುವಂತೆ, ಯಾವಾಗಲೂ ಆಶಾವಾದವನ್ನೇ ಬಯಸುವುದು ನಿತ್ಯ ನಿಯಮವಾಗಬೇಕು. ಅದಕ್ಕೆ ದಿನವೂ ಆ ಭಗವನ್ನಾಮಸ್ಮರಣೆಯೂ ಜೊತೆಯಾಗುತ್ತಲಿರಬೇಕು. ಆಗ ಎಲೆಮರೆಯ ಕಾಯಿಯಂತಾದರೂ ಬೆಳಗಲು ಸಾಧ್ಯವಾಗುವುದು. ಕಷ್ಟಗಳು ಬಂದವೆಂದು ಹೆದರಿ ಅಂಜದೇ ಆಳದೇ ಎದುರಿಸುವ ಶಕ್ತಿ ನೀಡೆಂದು ಆ ದೇವನನ್ನು ಪ್ರಾರ್ಥಿಸುವುದು ರೂಢಿಯಾಗಬೇಕು. ಬಂದ ಗಳಿಗೆ ಗೊತ್ತೇ ಇಲ್ಲ. ಆ ದೇವರಿಗೆ ಮಾತ್ರ ಗೊತ್ತು. ಹೋಗುವ ದಾರಿ, ಹೇಗೋ ಏನೋ ಎಂತೋ ಅರಿತಿಲ್ಲ. ಆತನ ಮನಸ್ಸಿನ ಇಚ್ಛೆಯಂತಾಗುವುದು. ವೃಥಾ ಚಿಂತೆ, ಆಯಾಸ ಮಾಡಿಕೊಳ್ಳದೇ ಶಾಂತ ಚಿತ್ತರಾಗಿ ಆತನ ನೆನೆವರಿಕೆ ಮಾಡಿಕೊಂಡರೆ ಉಸಿರಿನ ಮಹತ್ವದ ನೆಲೆಯನ್ನಾದರೂ ಅರಿತ ಹಾಗಾಗುತ್ತದೆ. ಪ್ರತಿ ಉಸಿರಿನ ಬಿಡುವಿಕೆಯಲ್ಲಿ ನಿರಾಳತೆ ಅನುಭವಿಸುತ್ತಿರಲು ಆ ದೇವನ ಸಾಕ್ಷಾತ್ಕಾರ ಸಿಕ್ಕಿದೆಯೆಂದರ್ಥ. ಅದನ್ನೇ ಪ್ರತಿದಿನ ಆಹಾರವನ್ನಾಗಿಸಿದರೆ ಸಮಯವೆಲ್ಲ ಆತ ನೊಂದಿಗೇ ಕಳೆದ ಹಾಗಾಗುತ್ತದೆ. ಬದುಕು ಸುಖವೆಂದರೇನೆಂದು ಆಗ ಅರ್ಥವಾಗುತ್ತದೆ. ಉಸಿರು ಎಂದರೆ ಆತನ ನೆನಕೆ – ಉಳಿಕೆ. ಉಳಿದೆಲ್ಲವೂ ನಗಣ್ಯವೇ ಸರಿ.

ಬದುಕನ್ನು ಬಂದಂತೆ ಅನುಭವಿಸುವುದಷ್ಟೇ ನಮ್ಮ ಹಣೆಯಲ್ಲಿ ಬರೆದಿದ್ದರೂ ಕೆಲವೊಮ್ಮೆ ನಮ್ಮ ಸಹಾನುಭೂತಿಗಳೇ ಇತರರಿಗೆ ಕುಮ್ಮಕ್ಕು ಹೆಚ್ಚಿಸಿಕೊಳ್ಳಲು ಸುಲಭ ಅಸ್ತ್ರವಾಗುವುದೂ ಇದೆ. ಕಾಲನ ಚಾಟಿಯೇಟು ನಿದ್ದೆಯ ಮಂಪರನ್ನು ಖಂಡಿತವಾಗಿ ಹೊಡೆದೋಡಿಸುತ್ತದೆ. ನ್ಯಾಯಮಾರ್ಗದಲ್ಲೇ ಇದ್ದರೂ ಸತ್ಯದ ಹೊಳಹಿನ ಕುರುಹು ಗೋಚರಿಸುವ ತನಕ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ. ಆ ಬಳಿಕ ಸ್ಮಶಾನ ಮೌನ. ಮಾತಿಲ್ಲದೇ ಕಥೆ ಕೊನೆಯಾಗುವ ಘಳಿಗೆಗೆ ತಾನೊಬ್ಬ ಆದರ್ಶನಾಗಿದ್ದರೆ ಸಾಕು ಎಂಬ ಸಾರ್ಥಕತೆ ಪಾಶ ಬಿಗಿಯುವಾಗೊಮ್ಮೆ ನೆನಪಾಗದೇ ಇರದು.

✍️ ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಗಾರರು, ಕವಯಿತ್ರಿ
ಮುಕ್ರಂಪಾಡಿ ದರ್ಬೆ 574202.

- Advertisement -

Related news

error: Content is protected !!