Tuesday, May 14, 2024
spot_imgspot_img
spot_imgspot_img

ಮಂಗಳೂರು: ಜಲೀಲ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ 10 ದಿನ ಪೊಲೀಸ್‌ ಕಸ್ಟಡಿ

- Advertisement -G L Acharya panikkar
- Advertisement -

ಮಂಗಳೂರು: ಶನಿವಾರ ರಾತ್ರಿ ನಡೆದ ಕಾಟಿಪಳ್ಳದ ಅಂಗಡಿ ಮಾಲೀಕ ಜಲೀಲ್ ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಶೈಲೇಶ್ ಪೂಜಾರಿ ಅಲಿಯಾಸ್ ಶೈಲು (21), ಸುವಿನ್ ಕಾಂಚನ್ (25) ಮತ್ತು ಪಚ್ಚು ಅಲಿಯಾಸ್ ಪವನ್ (26) ಬಂಧಿತರು.‌

ಈ ಪೈಕಿ ಶೈಲೇಶ್ ಮತ್ತು ಸುವಿನ್ ಕಾಂಚನ್ ಎಂಬವರು ಪಿಂಕಿ ನವಾಜ್ ಎಂಬಾತನ ಕೊಲೆ ಯತ್ನ ಪ್ರಕರಣದ ಆರೋಪಿಗಳು ಆಗಿದ್ದಾರೆ. ಅಂದರೆ 2018ರಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಪಿಂಕಿ ನವಾಜ್‌ನನ್ನು ಕೊಲೆ ಮಾಡಲು 2021ರ ಫೆ.10ರಂದು ಹತ್ಯೆ ಮಾಡಲು ಯತ್ನ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶೈಲೇಶ್ ಪೂಜಾರಿ ಹಲವು ವರ್ಷಗಳ ಹಿಂದೆ ನಡೆದ ರವೂಫ್ ಎಂಬಾತನ ಕೊಲೆ ಆರೋಪಿಯ ಪುತ್ರನಾಗಿದ್ದಾನೆ. ಸುಮಾರು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್ ಹತ್ಯೆ ಪ್ರಕರಣದಲ್ಲಿ ಈಗಿನ ಆರೋಪಿ ಶೈಲೇಶ್‌ ಅವರ ತಂದೆ ಕೇಶವ ಪೂಜಾರಿ ಪ್ರಮುಖ ಆರೋಪಿಯಾಗಿದ್ದರು.

ತನಿಖೆ ನಂತರ ಕೊಲೆಗೆ ಕಾರಣ ಬಯಲು; ಕಮೀಷನರ್‌

ಮಂಗಳೂರಿನ ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದೇವೆ. ಸದ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ.‌ 10 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ ಇಬ್ಬರು ನೇರ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ. ಗುರುತು ಪತ್ತೆ ಆಗೋವರೆಗೂ ಆರೋಪಿಗಳ ಮಾಹಿತಿ ಹೇಳಲು ಆಗಲ್ಲ. ನಿನ್ನೆ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ, ಹೆಚ್ಚಿನ ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಟಿಪಳ್ಳದ ಜಲೀಲ್ ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ಹೇಳುತ್ತೇವೆ. ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳ ಆರೋಪಿಗಳು. 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ವೊಂದರಲ್ಲೂ ಅವರು ಇದ್ದರು. ಜಲೀಲ್ ಕೇಸ್ ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.

144 ಸೆಕ್ಷನ್ ಮತ್ತೆರಡು ದಿನಕ್ಕೆ ವಿಸ್ತರಣೆ

ಕಾಟಿಪಳ್ಳ ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ 144 ಸೆಕ್ಷನ್ ನಿಷೇಧಾಜ್ಞೆಯನ್ನು ಡಿ.29ರ ಬೆಳಗ್ಗೆ 6 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ.

ಪಣಂಬೂರು, ಕಾವೂರು, ಬಜೈ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಡಿ.27ರ ಬೆಳಗ್ಗೆ 5 ಗಂಟೆ ವರೆಗೆ ಸೆಕ್ಷನ್ ಹಾಕಲಾಗಿತ್ತು. ಇದೀಗ ಆ ನಿಷೇಧಾಜ್ಞೆಯನ್ನು ಮತ್ತೆರಡು ದಿನ ವಿಸ್ತರಣೆ ಮಾಡಲಾಗಿದೆ. ಇದಲ್ಲದೆ, ಸೆಕ್ಷನ್ ವಿಧಿಸಿರುವ ಸಂದರ್ಭದಲ್ಲಿ ಸಂಜೆ ಆರು ಗಂಟೆಯಿಂದ ಬೆಳಗ್ಗಿನ ವರೆಗೆ ದ್ವಿಚಕ್ರ ವಾಹನದಲ್ಲಿ ಯುವಕರು ತಿರುಗಾಡುವಂತಿಲ್ಲ. 60 ವರ್ಷ ಮೇಲ್ಪಟ್ಟವರು, ಮಹಿಳೆಯರು, ಮಕ್ಕಳಿಗೆ ನಿಯಮ ಅನ್ವಯ ಆಗೋದಿಲ್ಲ.

- Advertisement -

Related news

error: Content is protected !!