Saturday, May 18, 2024
spot_imgspot_img
spot_imgspot_img

ಮೂಡಬಿದಿರೆ: ಮತ್ತೆ ಪೊಲೀಸ್ ನೈತಿಕ ಗಿರಿ; ವ್ಯಕ್ತಿಯೋರ್ವರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

- Advertisement -G L Acharya panikkar
- Advertisement -

ಮೂಡಬಿದಿರೆ: ಬಸ್ಸಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಮ್ ವ್ಯಕ್ತಿಯೊಬ್ಬರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮೂಡಬಿದಿರೆ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಮುಲ್ಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ಇಸಾಕ್ ಅವರು ಬುಧವಾರ ಬೆಳಗ್ಗೆ ಬಿ.ಸಿ.ರೋಡ್’ನಿಂದ ಮೂಡಬಿದ್ರೆಗೆ ಹೋಗಲು ಖಾಸಗಿ ಬಸ್ಸು ಹತ್ತಿದ್ದಾರೆ. ಬಸ್ಸಿನಲ್ಲಿ ವಿಪರೀತ ಪ್ರಯಾಣಿಕ ದಟ್ಟಣೆ ಇದ್ದ ಕಾರಣ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸಾಕ್ ಅವರಿಗೆ ನೀಡಿದ್ದಾರೆ. ಅವರ ಮನವಿಯಂತೆ ಇಸಾಕ್ ಬ್ಯಾಗ್ ತೆಗೆದುಕೊಂಡಿದ್ದು, ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸಾಕ್ ಅವರಿಂದ ಬ್ಯಾಗ್ ಪಡೆದು ಬಸ್ಸಿನಿಂದ ಇಳಿದಿದ್ದಾರೆ ಎನ್ನಲಾಗಿದೆ.

ಇದಾದ ಸ್ವಲ್ಪ ಹೊತ್ತಿನಲ್ಲೇ ಬಸ್ ಕಂಡೆಕ್ಟರ್, ಇಸಾಕ್ ಅವರ ಬಳಿ ಬಂದು ತಗಾದೆ ತೆಗೆದು, ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ, ಮಹಿಳೆಯ ಮೈ ಮುಟ್ಟಿದ್ದೀರಿ ಎಂದು ಆರೋಪ ಮಾಡಿ ಬಸ್ಸಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾಗಿ ತಿಳಿದುಬಂದಿದೆ. ಈ ಮಧ್ಯೆ ಕೆಲವರಿಗೆ ಕರೆ ಮಾಡಿ ಕೆಲವು ಯುವಕರನ್ನು ಅಲ್ಲಿಗೆ ಕರೆಸಿಕೊಂಡು ಅವರಿಗೆ ಹಸ್ತಾಂತರಿಸಿ ಬಸ್ಸಿನೊಂದಿಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಸಂಘಪರಿವಾರಕ್ಕೆ ಸೇರಿದ ಆ ಗುಂಪು ಇಸಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಸಂಘಪರಿವಾರದ ಕಾರ್ಯಕರ್ತರು ಬಳಿಕ ಇಸಾಕ್ ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಸಾಕ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆಯಿಂದ ಇಸಾಕ್ ಅವರ ಬೆನ್ನು ಕೈ ಕಾಲುಗಳಲ್ಲಿ ತೀವ್ರವಾದ ಬಾಸುಂಡೆ ಎದ್ದಿದೆ. ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತೀವ್ರ ನೋವು ಇದ್ದರೂ ವೈದ್ಯರಲ್ಲಿ ಅದನ್ನು ತೋರಿಸದಂತೆ ಪೊಲೀಸರು ಇಸಾಕ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವೈದ್ಯರು ಕೂಡ ಇಸಾಕ್ ಅವರ ಅಂಗಿ ತೆಗೆದು ಪರಿಶೀಲನೆ ನಡೆಸಿಲ್ಲ. ಕೇವಲ ರಕ್ತದೊತ್ತಡ ಪರೀಕ್ಷೆ ಮಾಡಿ ಇಸಾಕ್ ಅವರನ್ನು ಪೊಲೀಸರು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಇಸಾಕ್ ಅವರ ಕುಟುಂಬದವರು ಠಾಣೆಗೆ ಬಂದಿದ್ದು, ಸಂಜೆ 5.30ರವರೆಗೆ ಇಸಾಕ್ ಅವರನ್ನು ಠಾಣೆಯಲ್ಲೇ ಕೂರಿಸಲಾಗಿತ್ತು. ಬಳಿಕ ಇಸಾಕ್ ಅವರಿಂದ ಹೇಳಿಕೆ ಪಡೆದು ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇದೀಗ ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!