Friday, May 17, 2024
spot_imgspot_img
spot_imgspot_img

ರಾಜ್ಯದ ಕಾರಾಗೃಹಗಳಲ್ಲಿರುವ ಖೈದಿಗಳ ಕೂಲಿ ದರ ಹೆಚ್ಚಳ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದ ಕೇಂದ್ರ ಹಾಗೂ ಜಿಲ್ಲಾ ಕಾರಾಗೃಹಗಳಲ್ಲಿರುವ ಸಜಾ ಖೈದಿಗಳ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಇದೇ ಮೊದಲ ಬಾರಿಗೆ ಊಟ, ಬಟ್ಟೆಗಳ ವೆಚ್ಚ ಕಡಿತಗೊಳಿಸದೆ ಪೂರ್ಣ ಕೂಲಿ ದರವನ್ನು ನೀಡಲು ಸರಕಾರ ಆದೇಶ ಹೊರಡಿಸಿದೆ.

ನಾಲ್ಕು ವರ್ಗಗಳ ಆಧಾರದ ಮೇಲೆ ಈ ಮೊದಲು 175 ರೂ.ನಿಂದ 250 ರೂ.ವರೆಗೆ ಕೂಲಿ ದರ ನಿಗದಿ ಪಡಿಸಲಾಗಿತ್ತು. ಆದರೆ ಅವರ ಊಟ, ಬಟ್ಟೆ ವೆಚ್ಚ ಎಂದು 100 ರೂ. ಕಡಿತಗೊಳಿಸಿ, ಬಾಕಿ ಹಣವನ್ನು ಬಂದಿಯ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ ಹೊಸ ಆದೇಶದಲ್ಲಿ 524 ರೂ.ನಿಂದ 663 ರೂ.ವರೆಗೆ ಕೂಲಿ ದರ ಹೆಚ್ಚಿಸಲಾಗಿದ್ದು, ಈ ದರದಲ್ಲಿ ಯಾವುದೇ ಕಡಿತ ಮಾಡುವಂತಿಲ್ಲ ಎಂದು ಸರಕಾರ ಸೂಚಿಸಿದೆ.


ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ ಮತ್ತು ಶಿವಮೊಗ್ಗ ಸಹಿತ ಎಂಟು ಕೇಂದ್ರ ಕಾರಾಗೃಹಗಳಿವೆ. ಜತೆಗೆ ಜಿಲ್ಲಾ ಕಾರಾಗೃಹಗಳು ಸೇರಿ 52 ಜೈಲುಗಳಿವೆ. ಇಲ್ಲಿ 15,600ಕ್ಕೂ ಹೆಚ್ಚು ಖೈದಿಗಳಿದ್ದು, ಅದರಲ್ಲಿ 6-7 ಸಾವಿರ ಸಜಾ ಖೈದಿಗಳಾಗಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ಮಧ್ಯೆ ಕೆಲ ತಿಂಗಳ ಹಿಂದೆ ಕೂಲಿ ದರ ಹೆಚ್ಚಳಕ್ಕೆ ಕಾರ್ಮಿಕ ಇಲಾಖೆ, ಆರ್ಥಿಕ ಇಲಾಖೆ ಮತ್ತು ಕಾರಾಗೃಹ ಇಲಾಖೆಯ ಸದಸ್ಯರ ಸಮಿತಿ ಬೇರೆ ರಾಜ್ಯಗಳ ಕಾರಾಗೃಹಗಳ ಕೈದಿಗಳ ಕೂಲಿ ದರ ಪರಾಮರ್ಶಿಸಿ ಕಾರ್ಮಿಕರೇ ಆಗಲಿ, ಬಂದಿಗಳೇ ಆಗಲಿ ನಿರ್ವಹಿಸುವ ಕೆಲಸದ ಸ್ವರೂಪ ಹಾಗೂ ಕೆಲಸದ ಅವಧಿಯು ಏಕ ರೂಪವಾಗಿದೆ ಎಂಬ ಸಲಹೆ ಮೇರೆಗೆ ಈಗ ಕೂಲಿ ದರ ಹೆಚ್ಚಿಸಲಾಗಿದೆ. ತರಬೇತಿ ಕೆಲಸಗಾರನಿಗೆ 524 ರೂ., ಅರೆಕುಶಲ 548 ರೂ., ಕುಶಲ 615 ರೂ. ಮತ್ತು ಹೆಚ್ಚಿನ ಕುಶಲ ಬಂದಿಗೆ 663 ರೂ. ಕೂಲಿ ದರ ಹೆಚ್ಚಿಸಿದೆ. ಇದರೊಂದಿಗೆ ಕೂಲಿ ದರದಲ್ಲಿ ಯಾವುದೇ ಊಟ, ಬಟ್ಟೆ ವೆಚ್ಚ ಕಡಿತಗೊಳಿಸದೆ ಪೂರ್ಣ ಕೂಲಿ ದರವನ್ನು ಖೈದಿಗೆ ನೀಡಬೇಕು. ಮಹಿಳೆ/ಪುರುಷ ಬಂಧಿಗಳ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಬೇಕು. ಕೂಲಿ ದರವನ್ನು ನಿಯಮದಂತೆ ಖೈದಿಗಳ ಬ್ಯಾಂಕ್‌ ಖಾತೆಗೆ ಪಾವತಿ ಮಾಡಬೇಕು ಎಂದು ಸರಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಖೈದಿಯು ಮಾಡುವ 8 ಗಂಟೆಗಳ ಕೆಲಸಕ್ಕೆ ಪಾವತಿಸತಕ್ಕದ್ದು. ತರಬೇತಿ ಕೆಲಸಗಾರ ಖೈದಿ ಕನಿಷ್ಠ ಒಂದು ವರ್ಷ ತರಬೇತಿ ಪಡೆದ ಬಳಿಕ ಅರೆ ಕುಶಲ ಕೆಲಸಗಾರನಾಗುತ್ತಾನೆ. ಎರಡು ವರ್ಷ ಪೂರ್ಣಗೊಳಿಸಿದ ಬಳಿಕ ಕುಶಲ ಕೆಲಸಗಾರನಾಗುತ್ತಾನೆ. ಮೂರು ವರ್ಷಗಳು ಪೂರ್ಣಗೊಳಿಸಿದ ಬಳಿಕ ಈತನ ತಾಂತ್ರಿಕ, ವಿದ್ಯಾರ್ಹತೆ, ಸನ್ನಡತೆ ಆಧಾರದಲ್ಲಿ ಹೆಚ್ಚಿನ ಕುಶಲ ಖೈದಿ ವರ್ಗಕ್ಕೆ ಪರಿಗಣಿಸಲ್ಪಡುತ್ತಾನೆ. ಕೂಲಿ ಹಣವನ್ನು ನಿರ್ದಿಷ್ಟ ಕಾರ್ಯಕ್ಕೆ ಬಳಸಿಕೊಳ್ಳಬೇಕು ಹೊರತು ಅನ್ಯ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಸರಕಾರ ಹೇಳಿದೆ.

ಬಟ್ಟೆ ನೇಯ್ಗೆ, ಕರಕುಶಲ ಕೈಗಾರಿಕೆ, ಗುಡಿ ಕೈಗಾರಿಕೆ, ಮರಕೆಲಸ, ಹ್ಯಾಂಡ್‌ಲೂಮ್‌, ಬೇಕರಿ, ಗದ್ದೆ, ಹೊಲ, ತೋಟಗಾರಿಕೆ, ಹಾಲಿನ ಡೈರಿ ಸಾಕಷ್ಟು ವರ್ಗದ ಕೆಲಸಗಳು ಇವೆ. ಅವುಗಳಿಗೆ ಕೆಲವು ಖೈದಿಗಳನ್ನು ತರಬೇತಿ ಕೆಲಸಗಾರ (ಅನ್‌ಸ್ಕಿಲ್ಡ್‌), ಅರೆಕುಶಲ(ಸೆಮಿ ಸ್ಕಿಲ್ಡ್‌), ಕುಶಲ(ಸ್ಕಿಲ್ಡ್‌) ಹೆಚ್ಚಿನ ಕುಶಲ ಬಂದಿ (ಹೈಸ್ಕಿಲ್ಡ್‌) ಎಂದು ವರ್ಗೀಕರಿಸಿ ಕೆಲಸವನ್ನು ಹಂಚಿಕೆ ಮಾಡಲಾಗುತ್ತದೆ. ಇಂಥ ಕೆಲಸಗಾರರಿಗೆ 175 ರೂ., 200 ರೂ. 225 ರೂ. ಮತ್ತು 250 ರೂ. ಕೂಲಿ ನಿಗದಿಪಡಿಸಲಾಗಿತ್ತು.

- Advertisement -

Related news

error: Content is protected !!