Tuesday, May 21, 2024
spot_imgspot_img
spot_imgspot_img

ವಿಟ್ಲ: ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಫ್ತಾರ್ ಕೂಟ ಆಯೋಜಸಿದ ಹಿಂದೂ ನವ ವಿವಾಹಿತ

- Advertisement -G L Acharya panikkar
- Advertisement -

ವಿಟ್ಲ: ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆಯೇ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆಯತ್ತಿದೆ. ಹಿಜಾಬ್‌ನಿಂದ ಆರಂಭವಾದ ವೈಮನಸ್ಸು ಹಲಾಲ್, ವ್ಯಾಪಾರ ಬಹಿಷ್ಕಾರವನ್ನು ದಾಟಿ ಬಂಗಾರ ಖರೀದಿಯವರೆಗೂ ಬಂದು ನಿಂತಿದೆ.

ಇದು ಮುಂದೆ ಯಾವ ದಿಕ್ಕನ್ನು ಪಡೆಯಲಿದೆ ಅನ್ನುವ ಆತಂಕ‌ದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯದ ಘಟನೆ ನಡೆದಿದೆ. ತನ್ನ ಮದುವೆಗೆ ಬಂದರೂ ಉಪವಾಸ ನಿಮಿತ್ತ ಊಟ ಮಾಡದೇ ಹಿಂದಿರುಗಿದ ಮುಸ್ಲಿಂ ಗೆಳೆಯರಿಗೋಸ್ಕರ ಹಿಂದೂ ಯುವಕ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ, ನೂರಾರು ಮಂದಿಗೆ ಊಟ ಹಾಕಿದ ಮಾದರಿ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬೈರಿಕಟ್ಟೆಯಲ್ಲಿ ನಡೆದಿದೆ.

vtv vitla
vtv vitla

ಬೈರಿಕಟ್ಟೆಯ ನಿವಾಸಿ ಚಂದ್ರಶೇಖರ್ ಏಪ್ರಿಲ್ 24ರಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದು, ತನ್ನ ಮದುವೆಯ ಕರೆಯೋಲೆಯನ್ನು ಬಂಧು ಮಿತ್ರರು ಸಹಿತ ಊರಿನ ಮುಸ್ಲಿಂ ಗೆಳೆಯರಿಗೂ ನೀಡಿದ್ದರು. ಬೈರಿಕಟ್ಟೆ ಗೆಳೆಯರ ಬಳಗ ತಂಡದಲ್ಲಿ ಮುಸ್ಲಿಂ ಯುವಕರೂ ಇದ್ದು, ಚಂದ್ರಶೇಖರ್ ಅತ್ಯುತ್ತಮ ಸ್ನೇಹ ಸಂಪಾದನೆ ಮಾಡಿದ್ದರು. ಚಂದ್ರಶೇಖರ್ ಮದುವೆಗೆ ಮುಸ್ಲಿಂ ಗೆಳೆಯರೂ ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಿದ್ದರು.

ಮದುವೆಗೆ ಆಗಮಿಸಿದ ಬಂಧು ಮಿತ್ರರಿಗೆ ಅದ್ಧೂರಿಯಾಗಿ ಔತಣಕೂಟ ಏರ್ಪಡಿಸಲಾಗಿತ್ತು. ಆದರೆ ಮುಸ್ಲಿಂ ಗೆಳೆಯರಿಗೆ ರಂಜಾನ್ ಉಪವಾಸ ಇದ್ದ ಕಾರಣ ಮದುವೆಯ ಊಟವನ್ನು ಮಾಡಲು ಸಾಧ್ಯವಾಗಿರಲಿಲ್ಲ. ಮದುವೆಗೆ ಬಂದ ಮುಸ್ಲಿಂ ಗೆಳೆಯರು ಬರೀ ಹೊಟ್ಟೆಯಲ್ಲಿ ಮರಳಿ ಮನೆಗೆ ಹೋದದ್ದನ್ನು ಗಮನಿಸಿದ ಚಂದ್ರಶೇಖರ್, ಊರಿನ ಮಸೀದಿಯಲ್ಲಿ ಊರಿನ ಮುಸ್ಲಿಂ ಬಾಂಧವರಿಗೆ ತನ್ನ ಮದುವೆಯ ಪ್ರಯುಕ್ತ ಊಟ ಹಾಕಲು ತೀರ್ಮಾನಿಸಿದ್ದಾರೆ.

ಬೈರಿಕಟ್ಟೆಯ ಜುಮಾ ಮಸೀದಿಯಲ್ಲಿ ತನ್ನ ಊರಿನ ಎಲ್ಲಾ ಮುಸ್ಲಿಂ ಬಾಂಧವರಿಗಾಗಿ ಚಂದ್ರಶೇಖರ್ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಹಣ್ಣುಹಂಪಲು, ಜ್ಯೂಸ್ ಮತ್ತು ವಿವಿಧ ಬಗೆಯ ತಿಂಡಿಗಳನ್ನು ಇಫ್ತಾರ್ ಕೂಟದಲ್ಲಿ ಚಂದ್ರಶೇಖರ್ ನೀಡಿದ್ದಾರೆ. ಚಂದ್ರಶೇಖರ್ ಮತ್ತು ಅವರ ಹಿಂದೂ ಗೆಳೆಯರೂ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಎಲ್ಲರೂ ಸಹ ಭೋಜನ ಮಾಡಿದ್ದಾರೆ.

ಇಫ್ತಾರ್ ಕೂಟವನ್ನು ಏರ್ಪಡಿಸಿದ ನವವಿವಾಹಿತ ಚಂದ್ರಶೇಖರ್ ಅವರನ್ನು ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮಸೀದಿಯ ಧರ್ಮಗುರುಗಳು ಸನ್ಮಾನಿಸಿದ್ದಾರೆ. ಸೌಹಾರ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ಚಂದ್ರಶೇಖರ್ ನೀಡಿದ ಆತಿಥ್ಯಕ್ಕೆ ಶುಭ ಹಾರೈಸಿದ್ದಾರೆ.

ಸೌಹಾರ್ದತೆಯ ಇಫ್ತಾರ್ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್, ನಮ್ಮ ಊರಿನಲ್ಲಿ ಎಲ್ಲಾ ಗೆಳೆಯರು ಜಾತಿಮತದ ಬೇಧವಿಲ್ಲದೆ ಸೌಹಾರ್ದತೆಯಿಂದ ಎಲ್ಲರ ಕಷ್ಟಕ್ಕೆ ಎಲ್ಲರೂ ಹೆಗಲಾಗಿ ಇದ್ದೇವೆ. ಮದುವೆಗೆ ಆಗಮಿಸಿದ ಮುಸ್ಲಿಂ ಸ್ನೇಹಿತರಿಗೆ ಮದುವೆಯ ಊಟ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಮಸೀದಿಯಲ್ಲಿ ಇಫ್ತಾರ್ ಕೂಟ ಮಾಡಿದ್ದೇವೆ. ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!