ನವದೆಹಲಿ: ‘100 ವರ್ಷಗಳ ನಂತರ ರಾಮಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗುವುದು. ಭವಿಷ್ಯದಲ್ಲಿ ಮುಸ್ಲಿಮರು ಮೌನವಾಗಿರುವುದಿಲ್ಲ ಎಂದು ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೈಮ್ಸ್ ನೌ ನವಭಾರತ್’ ಚಾನೆಲ್ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಅಡಿಗಲ್ಲು ಹಾಕಿದ್ದು, ಭಾರತೀಯ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಇನ್ನು 100 ವರ್ಷಗಳ ನಂತರ ಭಾರತದಲ್ಲಿ ಮುಸ್ಲಿಮರು ಅಧಿಕಾರಕ್ಕೆ ಬರಲಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಲಾಗುತ್ತದೆ ಮತ್ತು ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗುತ್ತದೆ ಎಂದರು.
ಇಂದು ಮುಸ್ಲಿಮರು ಮೌನವಾಗಿದ್ದಾರೆ. ಆದರೆ ನನ್ನ ಮಕ್ಕಳು ನನ್ನ ಮಗ, ಅವನ ಮಗ, ಮೊಮ್ಮಗ ಇವರೆಲ್ಲ 50-100 ವರ್ಷಗಳ ನಂತರ, ನಮ್ಮ ಮಸೀದಿ ಕೆಡವಿ ಮಂದಿರ ಕಟ್ಟಲಾಗಿತ್ತು ಎಂದು ಇತಿಹಾಸದ ಪಾಠದಿಂದ ತಿಳಿಯಲಿದ್ದಾರೆ. ಆ ಸಮಯದಲ್ಲಿ ಮುಸ್ಲಿಂ ನ್ಯಾಯಾಧೀಶರು, ಮುಸ್ಲಿಂ ಆಡಳಿತಗಾರ ಅಥವಾ ಮುಸ್ಲಿಂ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂದರು. ರಶೀದಿ ಇಂಥ ಹೇಳಿಕೆ ನೀಡುವುದು ಇದು ಮೊದಲೇನಲ್ಲ. ಕಳೆದ ನವೆಂಬರ್‌ನಲ್ಲಿ ಸರ್ಕಾರವು ಖಾಸಗಿ ಮದರಸಾಗಳನ್ನು ಮುಟ್ಟಲು ಧೈರ್ಯ ಮಾಡಿದರೆ ಭಾರತದ ಧಗಧಗಿಸಲಿದೆ’ ಎಂದಿದ್ದರು.