




ಬಿರಿಯಾನಿ ತಿಂದು 17 ಮಂದಿ ಅಸ್ವಸ್ಥರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮನೆಯೊಂದರಲ್ಲಿ ನಡೆದ ಕುಟುಂಬ ಸಮಾರಂಭದಲ್ಲಿ ಮಾಂಸಾಹಾರಿ ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಾದವರು ಕಡೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಮರವಂಜಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಸಮಾರಂಭದಲ್ಲಿ ಬಿರಿಯಾನಿ ಸೇವಿಸಿದವರಿಗೆ ಸೋಮವಾರ ಭೇದಿ, ವಾಂತಿ ಕಾಣಿಸಿಕೊಂಡಿತ್ತು. ಕೂಡಲೇ ಗ್ರಾಮಸ್ಥರು ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಸ್.ಎನ್.ಉಮೇಶ್ ಹಾಗೂ ಸಿಬ್ಬಂದಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಿದರು. ಅವರನ್ನು ಆಸ್ಪತ್ರೆಯ ಮೂರು ಕೊಠಡಿಗಳಲ್ಲಿ ದಾಖಲಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಸ್ವಸ್ಥರಲ್ಲಿ ಒಂಬತ್ತು ಮಂದಿ ಮಹಿಳೆಯರು ಸೇರಿದ್ದಾರೆ. ಶಾಸಕ ಕೆ.ಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದಾರೆ.