
ಬೆಳ್ತಂಗಡಿ, ಜೂ. 4: ಅಕ್ರಮವಾಗಿ ಜಾನುವಾರನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಮರ್ಥ ಆರ್. ಗಾಣಿಗೇರ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಮಂಜುಶ್ರೀ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಯಿತು. ಈ ವೇಳೆ ತೋಟತ್ತಾಡಿ ನಿವಾಸಿ ಅನಿಲ್ ಪಿ (34) ಎಂಬಾತ ಯಾವುದೇ ಪೂರ್ವಾನುಮತಿ ದಾಖಲೆಗಳಿಲ್ಲದೆ ಪಿಕ್‌ಅಪ್ ವಾಹನದಲ್ಲಿ ಜಾನುವಾರೊಂದನ್ನು ಸಾಗಿಸುತ್ತಿರುವುದು ಪತ್ತೆಯಾಯಿತು.
ವಿಚಾರಣೆ ವೇಳೆ ಆತ ಸದರಿ ಜಾನುವಾರನ್ನು ರಾಘವೇಂದ್ರ ಭಟ್ (45) ಎಂಬವರಿಂದ ಖರೀದಿಸಿದ್ದು, ಮಾಂಸಕ್ಕಾಗಿ ತೋಮಸ್ ತೋಟತ್ತಾಡಿ (30) ಹಾಗೂ ಕಕ್ಕಿಂಜೆ ನಿವಾಸಿ ಕಬೀರ್ (28) ಅವರೊಂದಿಗೆ ಸೇರಿ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ-2020ರ ಕಲಂ 5, 7 ಹಾಗೂ 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ








