

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಸೌಜನ್ಯ ಅವರ ತಾಯಿ ಕುಸುಮಾವತಿ ಮತ್ತು ಇಂದಿರಾವತಿ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಧರ್ಮಸ್ಥಳ ಗ್ರಾಮದ ನಿವಾಸಿ ಕಿಶೋರ್ ಎಂಬವರು ಎಸ್ಐಟಿಗೆ ದೂರು ಸಲ್ಲಿಸಿದ್ದಾರೆ.ಮಂಗಳೂರಿನ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿರುವ ಕಿಶೋರ್, ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರ ಜನನ ಹಾಗೂ ಕುಟುಂಬದ ಹಿನ್ನೆಲೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಕುಸುಮಾವತಿಯವರು ಸೌಜನ್ಯ ಅವರ ತಾಯಿಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.ಕಿಶೋರ್ ಅವರ ದೂರಿನ ಪ್ರಕಾರ, 2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಇಂದಿರಾವತಿ ಕೋಂ ಚಂದಪ್ಪ ಗೌಡ ಅವರಿಗೆ ಜಮೀನು ಮಂಜೂರಾಗಿತ್ತು. ಆದರೆ, ಆ ಜಮೀನು ಕುಸುಮಾವತಿ ಅವರ ಹೆಸರಿನಲ್ಲಿ ಸ್ವಾಧೀನದಲ್ಲಿರುವ ಬಗ್ಗೆ ದಾಖಲೆಗಳಿವೆ ಎಂದು ಅವರು ಆರೋಪಿಸಿದ್ದಾರೆ. ಇಂದಿರಾವತಿ ಎಂಬವರು ಪಾಂಗಳ ಗ್ರಾಮದಲ್ಲಿ ವಾಸವಿರಲಿಲ್ಲ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಎಸ್ಐಟಿ ರಚನೆಗೂ ಮುನ್ನ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾಗಿ ತಿಳಿಸಿರುವ ಕಿಶೋರ್, ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಕ್ಕೆ ಸಂಬಂಧಿಸಿದ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿನ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂಬ ಆರೋಪವನ್ನೂ ಮಾಡಿದ್ದಾರೆ.ಸೌಜನ್ಯ ಮತ್ತು ಸೌಮ್ಯ ಅವರ ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕ ಸತ್ಯಾಂಶ ಪತ್ತೆಹಚ್ಚಬೇಕು ಎಂದು ಕಿಶೋರ್ ಮನವಿ ಮಾಡಿದ್ದಾರೆ.
ಕುಸುಮಾವತಿ ಅವರನ್ನು ವಿಚಾರಣೆಗೆ ಒಳಪಡಿಸಿ, ಚಂದಪ್ಪ ಗೌಡರ ಕುಟುಂಬದ ವಂಶವೃಕ್ಷ ಹಾಗೂ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸಬೇಕು ಮತ್ತು ಸ್ಥಳೀಯರಿಂದ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಕೋರಿದ್ದಾರೆ.ಇದಲ್ಲದೆ, ಗುರುತಿನ ದಾಖಲೆಗಳಲ್ಲಿ ವಂಚನೆ, ನಕಲಿ ದಾಖಲೆಗಳ ಸೃಷ್ಟಿ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಹಾಗೂ ಸರ್ಕಾರಕ್ಕೆ ವಂಚನೆ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು. ಈ ಕೃತ್ಯಗಳಲ್ಲಿ ಯಾರಾದರೂ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಹಾಗೂ ಸೌಜನ್ಯ ಅವರ ಮಾವ ವಿಠಲ ಗೌಡ ಅವರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕಿಶೋರ್ ಮನವಿ ಮಾಡಿದ್ದಾರೆ.








