

ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಿದ್ದ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ 2 ವರ್ಷಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿದೆ.ಪುತ್ತೂರು ಸಿರಿ ಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್. ಶಾಹಿರ್ ಅಲಿಯಾಸ್ ಶಾಕಿರ್ (41) ಶಿಕ್ಷೆಗೆ ಗುರಿಯಾದ ಆರೋಪಿ.ಉಪ್ಪಿನಂಗಡಿ ಪೊಲೀಸ್ ಠಾಣೆಯ ಅ.ಕ್ರ. 120/2008ರಲ್ಲಿ ಕಲಂ 450, 302, 201 ಐಪಿಸಿ ಅಡಿ ಆರೋಪಿಯಾಗಿದ್ದ ಶಾಕಿರ್‌ನನ್ನು 2016ರ ಏಪ್ರಿಲ್ 5ರಂದು ಮಂಗಳೂರು ಕಾರಾಗೃಹದಿಂದ ವಿಚಾರಣೆಗಾಗಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕರೆತರಲಾಗಿತ್ತು.


ಈ ವೇಳೆ ನ್ಯಾಯಾಲಯದ ಕಲಾಪ ನಡೆಯುತ್ತಿದ್ದಾಗ ಏಕಾಏಕಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದನು.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2016, ಕಲಂ 224 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು 2026ರ ಅಕ್ಟೋಬರ್ 5ರಂದು ಆರೋಪಿಗೆ 2 ವರ್ಷಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಖಾದರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕಾನೂನು ಅಭಿಯೋಜಕ ಮನೋಜ್ ಕುಮಾರ್ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು








