

ಮಂಗಳೂರು: ನವರಾತ್ರಿ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಅನುಮತಿಸಲಾದ ಚಟುವಟಿಕೆಗಳನ್ನು ತಡೆಯಲು ಯತ್ನಿಸಿದರೆ ಮತ್ತು ಇದರಿಂದಾಗಿ ತೊಂದರೆಗೊಳಗಾದವರು ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.ಯಾರಾದರೂ ಕಾನೂನುಬದ್ಧ ಚಟುವಟಿಕೆಗಳನ್ನು ಅನೈತಿಕ ಎಂಬ ನಿಲುವಿನೊಂದಿಗೆ ತಡೆಯಲು ಪ್ರಯತ್ನಿಸಿದರೆ ಅಂತವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಅವರ ಕೃತ್ಯದ ತೀವ್ರತೆಯ ಆಧಾರದ ಮೇಲೆ ಶಿಕ್ಷೆ ಅನುಭವಿಸಲಿದ್ದಾರೆ.

10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.ಯಾರಾದರೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಬಯಸಿದರೆ, ಅವರು ನಮಗೆ ಮಾಹಿತಿ ನೀಡಿದರೆ ಸಾಕು. ನಾವು ಅದನ್ನು ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.ನವರಾತ್ರಿ ಹಬ್ಬದ ಅಂಗವಾಗಿ ನಗರದ ವಿವಿಧೆಡೆ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಶೈಲಿಯ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಸಂಘ ಪರಿವಾರದ ಕೆಲವು ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಈ ರೀತಿ ಎಚ್ಚರಿಕೆ ನೀಡಿದ್ದಾರೆ.









