Sunday, June 7, 2026
spot_imgspot_img
spot_imgspot_img

ಆನ್ ಲೈನ್ ಗೇಮ್ ಆಡ್ಬೇಡ ಅಂದಿದ್ದಕ್ಕೆ ತಂದೆ, ಅಕ್ಕನನ್ನು ಇರಿದು ಕೊಲೆಗೈದ ಯುವಕ- ತಾಯಿಯ ಮೇಲೂ ಮಾರಣಾಂತಿಕ ಹಲ್ಲೆ

- Advertisement -
- Advertisement -

ಗಂಗಾವತಿ: ಆನ್ ಲೈನ್ ಗೇಮ್ ಆಡಬೇಡ ಎಂದಿದಕ್ಕೆ ಯುವಕನೋರ್ವ ಸ್ವಂತ ತಂದೆ ಮತ್ತು ಅಕ್ಕಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಗಂಗಾವತಿಯ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ. ವೆಂಕಟ ನಾಯ್ಡು ಮತ್ತು ಪ್ರಗತಿ (19) ಕೊಲೆಯಾದವರು. ಸಾಯಿ ವೆಂಕಟ ಮಣಿದೀಪ (18) ಕೊಲೆ ಆರೋಪಿಯಾಗಿದ್ದಾನೆ.

ತಾಯಿ ಸೌಜನ್ಯಾ ಅವರ ಮೇಲೂ ಆರೋಪಿ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಪ್ರಗತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ತಂದೆ ವೆಂಕಟ ನಾಯ್ಡು ಚಿಕಿತ್ಸೆ ಫಲಿಸದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಹಿನ್ನೆಲೆ: ವೆಂಕಟ ನಾಯ್ಡು ಕುಟುಂಬದ ಸದಸ್ಯರು ಶನಿವಾರ ರಾತ್ರಿ ಮನೆಯ ಅಂಗಳದಲ್ಲಿ ಕುಳಿತು ಹಣ್ಣು ಸೇವಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಆನ್ ಲೈನ್ ಗೇಮ್ ಆಡುವ ವಿಚಾರಕ್ಕೆ ಸಂಬಂಧಿಸಿ ಇವರೊಳಗೆ ವಾಗ್ವಾದ ನಡೆದಿದೆ. ಬಳಿಕ ಇವರು ಮನೆಯೊಳಗೆ ತೆರಳಿದ್ದು, ಅಲ್ಲೂ ಇವರೊಳಗೆ ತೀವ್ರ ವಾಗ್ವಾದ ಮುಂದುವರಿದಿತ್ತೆನ್ನಲಾಗಿದೆ. ಬಳಿಕ ಇವರು ಮಲಗಿದ್ದ ವೇಳೆ ವೆಂಕಟ ನಾಯ್ಡು ಅವರ ಕಿರಿಯ ಪುತ್ರ ಸಾಯಿ ವೆಂಕಟ ಚಾಕುವಿನಿಂದ ತಂದೆ, ತಾಯಿ ಮತ್ತು ಅಕ್ಕನ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಈ ದಾಳಿಯಲ್ಲಿ ಅಕ್ಕ ಪ್ರಗತಿಯ ಕುತ್ತಿಗೆಗೆ ಗಂಭೀರ ಹಲ್ಲೆ ಮಾಡಿದ್ದ ಆರೋಪಿ ಸಾಯಿ ವೆಂಕಟ, ತಡೆಯಲು ಬಂದ ತಂದೆಯ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ಆಗುತ್ತಿದ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಸಹಾಯಕ್ಕಾಗಿ ಧಾವಿಸಿದ್ದಾರೆ. ಆದರೆ ಮನೆಯ ಬಾಗಿಲು ಮುಚ್ಚಿ ಒಳಗಿನಿಂದ ಚಿಲಕ ಹಾಕಿದ್ದರಿಂದ ಅದು ಸಾಧ್ಯವಾಗಿಲ್ಲ. ಬಳಿಕ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ನಾಲ್ವರು ಕೂಡಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ದಾಳಿ ನಡೆಸಿದ ಆರೋಪಿ ಸಾಯಿ ವೆಂಕಟ ಕೂಡ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಯ ಅಜ್ಜ ತತಾರಾವ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಆರೋಪಿ ಸದ್ಯ ಪೊಲೀಸ್ ಕಾವಲಿನಲ್ಲಿ ಆಸ್ತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಘಟನಾ ಸ್ಥಳಕ್ಕೆ ನಾನು ಭೇಟಿ ನೀಡಿ ತನಿಖೆ ನಡೆಸಿದ್ದೇವೆ, ಮಲಗಿದ್ದಾಗ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಕ್ಕೆ ಸೂಚಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದೇವೆ ಎಂದು ಡಾ. ರಾಮ್ ಎಲ್. ಅರಸಿದ್ದಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!