
ಬೆಳ್ತಂಗಡಿ, ಜು.13: ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವತಿಯೊಬ್ಬರು ಸ್ನೇಹಿತನೊಂದಿಗೆ ದಿಡುಪೆ ಫಾಲ್ಸ್‌ಗೆ ತೆರಳಿದ್ದ ವೇಳೆ ಅನ್ಯಧರ್ಮೀಯ ಯುವಕನೊಂದಿಗೆ ಬಂದಿದ್ದೀರಿ ಎಂದು ತಕರಾರು ತೆಗೆದು ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐವರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 12ರಂದು ರಜೆ ಹಿನ್ನೆಲೆಯಲ್ಲಿ ಯುವತಿ ತನ್ನ ಸ್ನೇಹಿತನೊಂದಿಗೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್‌ಗೆ ತೆರಳಿದ್ದರು. ಈ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ 5, 6 ಮಂದಿ ಅವರನ್ನು ಅಡ್ಡಗಟ್ಟಿ, ಅನ್ಯಧರ್ಮೀಯ ಯುವಕನೊಂದಿಗೆ ಬಂದಿರುವ ವಿಚಾರವಾಗಿ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026 ದಾಖಲಿಸಲಾಗಿದ್ದು, ಬಿಎನ್‌ಎಸ್ 2023ರ ಕಲಂ 126(2), 352, 351(2) ಜೊತೆಗೆ 3(5)**ರಡಿ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ








