ಆರೋಪಿ ಪರ ಶಿವಾನಂದ ವಕ್ಕೆತ್ತಿರಿ ವಿಟ್ಲ ಮತ್ತು ಮಿತೇಶ್ ಪೂಜಾರಿ ವಕೀಲರ ತಂಡ ವಾದ ಮಂಡನೆ
ಉಳ್ಳಾಲ: ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಚಂದ್ರಹಾಸ ಯು. ಎಂಬಾತನಿಗೆ ಉಳ್ಳಾಲದ ಪೋಕ್ಸೋ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


ದೂರುದಾರ ಮಹಿಳೆ ತನ್ನ ಕುಟುಂಬದೊಂದಿಗೆ ಆರೋಪಿಯ ಮನೆಯ ಕಾಂಪೌಂಡ್‌ನಲ್ಲಿರುವ ಮತ್ತೊಂದು ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಬಾಡಿಗೆ ಹಣದ ವಿಚಾರದಲ್ಲಿ ದೂರುದಾರ ಮಹಿಳೆ ಹಾಗೂ ಆರೋಪಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ.

ಮಹಿಳೆ ನೀಡಿದ ದೂರಿನ ಪ್ರಕಾರ, ಜೂನ್ 26ರಂದು ತನ್ನ ನಾಲ್ಕು ವರ್ಷದ ಪುತ್ರಿ ಅಣ್ಣನೊಂದಿಗೆ ಆಟವಾಡುತ್ತಿದ್ದ ವೇಳೆ ಆರೋಪಿ ಮಗುವನ್ನು ಮನೆಯ ಹಿಂಭಾಗದಲ್ಲಿರುವ ಬಟ್ಟೆ ಒಗೆಯುವ ಕಲ್ಲಿನ ಬಳಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.
ಜುಲೈ 14ರಂದು ಮಗು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಉಳ್ಳಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ದೊರೆತಿದ್ದು, ಮಗುವೂ ಆರೋಪಿ ಚಂದ್ರಹಾಸ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿಕೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2026ರಡಿ ಬಿಎನ್‌ಎಸ್ ಕಲಂ 75 ಹಾಗೂ ಪೋಕ್ಸೋ ಕಾಯ್ದೆಯ ಕಲಂ 4 ಮತ್ತು 8ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.
ಆದರೆ ಆರೋಪಿ ಹಾಗೂ ಆತನ ಕುಟುಂಬಸ್ಥರು ವಕೀಲರ ಮೂಲಕ ಪ್ರಕರಣದ ಸತ್ಯಾಸತ್ಯತೆಯನ್ನು ಪ್ರಶ್ನಿಸಿ, ಬಾಡಿಗೆ ವಿಚಾರದಲ್ಲಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು.
ಅಲ್ಲದೆ, ದೂರುದಾರ ಮಹಿಳೆ ತಿಳಿಸಿರುವಂತೆ ಜೂನ್ 26ರಂದು ಘಟನೆ ನಡೆದ ಸಮಯದಲ್ಲಿ ಮಹಿಳೆ ಹಾಗೂ ಮಗು ಉಳ್ಳಾಲದ ದೇವಸ್ಥಾನದಲ್ಲಿದ್ದರು ಎಂದು ಆರೋಪಿಸಲಾಗಿದ್ದು, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಪ್ತಿ ಮಾಡುವಂತೆ ಆರೋಪಿ ಪರ ವಕೀಲ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ ಅವರು ಬಿಎನ್‌ಎಸ್‌ಎಸ್ ಕಲಂ 94ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಸಲ್ಲಿಕೆಯ ಬಳಿಕ ದೂರುದಾರ ಮಹಿಳೆ ಘಟನೆಯ ದಿನಾಂಕದ ಕುರಿತು ಮತ್ತೊಂದು ಹೇಳಿಕೆ ನೀಡಿದ್ದು, ಜೂನ್ 26ರ ಬದಲು ಜುಲೈ 5ರಂದು ಘಟನೆ ನಡೆದಿದೆ ಎಂದು ತಿಳಿಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಘಟನೆಯ ದಿನಾಂಕದ ಬಗ್ಗೆ ದೂರುದಾರರ ಹೇಳಿಕೆಯಲ್ಲಿ ಕಂಡುಬಂದ ವ್ಯತ್ಯಾಸ, ಬಾಡಿಗೆ ವಿಚಾರದಲ್ಲಿನ ಮನಸ್ತಾಪ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಜಪ್ತಿಗೆ ಅರ್ಜಿ ಸಲ್ಲಿಸಿದ ಬಳಿಕ ದಿನಾಂಕ ಬದಲಾಗಿರುವ ಅಂಶಗಳನ್ನು ನ್ಯಾಯಾಲಯ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಂತದಲ್ಲಿ ಘಟನೆ ಹಾಗೂ ದೂರುದಾರ ಮಹಿಳೆ ನೀಡಿರುವ ದೂರಿನ ಕುರಿತು ಸಂಶಯಕ್ಕೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಮನು ಕೆ.ಎಸ್. ಅವರು, ಪ್ರಕರಣವನ್ನು ಸುಳ್ಳಾಗಿ ದಾಖಲಿಸಲಾಗಿದೆ ಎಂಬ ಆರೋಪ ಪರ ವಕೀಲರ ವಾದವನ್ನು ಈ ಹಂತದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪರಿಗಣಿಸಿ, ಕ್ರಿಮಿನಲ್ ಮಿಸ್ ಕೇಸ್ ನಂ.770/2026ರಲ್ಲಿ ಆರೋಪಿ ಚಂದ್ರಹಾಸ ಯು. ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿ ಪರವಾಗಿ ವಕೀಲರಾದ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ, ಮಿತೇಶ್ ಪೂಜಾರಿ, ಸಜಿನಿ ಮೋಹನ್ ಹಾಗೂ ಅಭಿಲಾಶ್ ಶಾಸ್ತ್ರಿ ವಾದ ಮಂಡಿಸಿದ್ದರು.








