

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಸೇವಾ ಸಿಂಧು ಕೇಂದ್ರಗಳು ಹಾಗೂ ಮನೆ-ಮನೆ ಸಮೀಕ್ಷೆಯ ಮೂಲಕ ಫಲಾನುಭವಿಗಳ ಮರುಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.


ಮರುಪರಿಶೀಲನೆ ವೇಳೆ ಫಲಾನುಭವಿಗಳ ಬಯೊಮೆಟ್ರಿಕ್ ಹಾಗೂ ಫೇಸ್ ಆಥೆಂಟಿಕೇಶನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಇ-ಡಿಸಿಎಸ್ ಮೂಲಕ ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಪರಿಶೀಲನಾ ಹಂತದಲ್ಲಿದೆ.ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,24,48,938 ಫಲಾನುಭವಿಗಳಿದ್ದು, ಇದುವರೆಗೆ 32 ಕಂತುಗಳಲ್ಲಿ ತಲಾ ₹2,000ರಂತೆ ಒಟ್ಟು ₹76,951 ಕೋಟಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
ಯೋಜನೆ ಆರಂಭವಾದಾಗಿನಿಂದ 2026ರ ಜೂನ್ ಅಂತ್ಯದವರೆಗೆ 3,13,297 ಫಲಾನುಭವಿಗಳು ಮೃತಪಟ್ಟಿದ್ದಾರೆ. ಈ ಪೈಕಿ 1,10,562 ಮೃತ ಫಲಾನುಭವಿಗಳ ಖಾತೆಗಳಿಗೆ ಮರಣದ ನಂತರವೂ ₹117.31 ಕೋಟಿ ಹಣ ಜಮೆಯಾಗಿದೆ. ಈ ಮೊತ್ತದಲ್ಲಿ ಇದುವರೆಗೆ ₹40.07 ಕೋಟಿ ಮಾತ್ರ ಸರಕಾರದ ಲೆಕ್ಕಕ್ಕೆ ಮರುಜಮೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುವ ಹಿನ್ನೆಲೆಯಲ್ಲಿ ಯೋಜನೆಯ ದುರುಪಯೋಗ ತಡೆಯಲು ಮರುಪರಿಶೀಲನೆ ಕೈಗೊಳ್ಳಲಾಗಿದೆ. ಮೃತಪಟ್ಟ ಫಲಾನುಭವಿಗಳ ಬದಲಿಗೆ ಕುಟುಂಬದ ಅರ್ಹ ಸದಸ್ಯರನ್ನು ಫಲಾನುಭವಿಗಳಾಗಿ ಸೇರ್ಪಡೆಗೊಳಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ ಬೆಳಗಾವಿಯಲ್ಲಿ ಅತಿ ಹೆಚ್ಚು 24,705 ಫಲಾನುಭವಿಗಳು ಮೃತಪಟ್ಟಿದ್ದರೆ, ಕೊಡಗಿನಲ್ಲಿ ಅತಿ ಕಡಿಮೆ 2,991 ಫಲಾನುಭವಿಗಳು ಮೃತಪಟ್ಟಿದ್ದಾರೆ. ಮೃತರ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಜಿಲ್ಲಾವಾರು ನಡೆಯುತ್ತಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.








