


ಬೆಂಗಳೂರು: ಅತ್ಯಾಚಾರ ಎಸಗಿದ ಆರೋಪಕ್ಕೆ ಪ್ರತೀಕಾರವಾಗಿ ಇಬ್ಬರು ಯುವಕರನ್ನು ಅಪಹರಿಸಿ ₹10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣವನ್ನು ಮಾರತಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಯುವತಿಯೊಬ್ಬಳ ಸಹಿತ 10 ಮಂದಿಯನ್ನು ಬಂಧಿಸಿದ್ದಾರೆ. ಈ ನಡುವೆ ಅಪಹರಣಕ್ಕೊಳಗಾಗಿದ್ದ ಇಬ್ಬರು ಯುವಕರ ಮೇಲೂ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಅ.28ರಂದು ಬುರ್ಸು ಮಹೇಂದ್ರ (23) ಹಾಗೂ ಆತನ ಸ್ನೇಹಿತ ಯೆರ್ರಿಬೋನಿ ತರುಣ್ (23) ಎಂಬವರನ್ನು ಅಪಹರಿಸಿ ₹10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿರುವುದಾಗಿ ಮಹೇಂದ್ರನ ತಂದೆ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಇಬ್ಬರನ್ನು ರಕ್ಷಿಸಿ, ಯುವತಿಯೊಬ್ಬಳ ಸಹಿತ 10 ಮಂದಿಯನ್ನು ಬಂಧಿಸಿದ್ದಾರೆ.ವಿಚಾರಣೆ ವೇಳೆ ಅಪಹರಣದ ಹಿಂದಿನ ಕಾರಣ ಬಹಿರಂಗವಾಗಿದೆ. ಆಂಧ್ರ ಮೂಲದ ಮಹೇಂದ್ರ, ತರುಣ್ ಹಾಗೂ ಮಂಜುನಾಥ್ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಾಫ್ಟ್‌ವೇರ್ ಉದ್ಯೋಗ ಮಾಡುತ್ತಿದ್ದರು. ಮಂಜುನಾಥ್ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಸ್ನೇಹಿತ ರಾಜಕುಮಾರ್ ತನ್ನ ಪ್ರೇಯಸಿಯೊಂದಿಗೆ ಮನೆಗೆ ಬಂದಿದ್ದ.
ಈ ವೇಳೆ ಮಧ್ಯರಾತ್ರಿ ಮದ್ಯದ ಅಮಲಿನಲ್ಲಿದ್ದ ಮಹೇಂದ್ರ, ರಾಜಕುಮಾರ್‌ನನ್ನು ಪ್ರತ್ಯೇಕವಾಗಿ ಕೂಡಿ ಹಾಕಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಈ ಘಟನೆಯಿಂದ ಆಕ್ರೋಶಗೊಂಡ ಯುವತಿ, ತನ್ನ ಪ್ರಿಯಕರ ರಾಜಕುಮಾರ್ ಹಾಗೂ ಮಂಜುನಾಥ್ ಸೇರಿದಂತೆ ಇತರರೊಂದಿಗೆ ಸೇರಿ ಮಹೇಂದ್ರ ಮತ್ತು ತರುಣ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಬೇಡಿಕೆಯಿಟ್ಟ ಹಣ ದೊರೆತ ಬಳಿಕ ಇಬ್ಬರನ್ನು ಕೊಲೆ ಮಾಡಲು ಅಪಹರಣಕಾರರು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಆದರೆ ದೂರು ದಾಖಲಾದ ಆರು ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಇಬ್ಬರನ್ನು ರಕ್ಷಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಹೇಂದ್ರ ಮತ್ತು ತರುಣ್‌ನನ್ನೂ ಬಂಧಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.







