
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ರೆಂಕೆದ ಗುತ್ತು, ಕಸಬಾ ಗ್ರಾಮದ 14 ವರ್ಷದ ಬಾಲಕ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.ನಾಪತ್ತೆಯಾದ ಬಾಲಕನನ್ನು ಶ್ರೇಯಸ್ ಎಸ್. ಕುಂಬಾರ ಎಂದು ಗುರುತಿಸಲಾಗಿದೆ. ಅ.4ರಂದು ಬೆಳಿಗ್ಗೆ ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಹುಲಿ ವೇಷ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಶ್ರೇಯಸ್, ತರಬೇತಿ ಮುಗಿದ ಬಳಿಕ ಸ್ನೇಹಿತರೊಂದಿಗೆ ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದನು.ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದ ಅವರು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್ ನೀರಿನಲ್ಲಿ ಮುಳುಗಿ, ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಭಯಗೊಂಡಿದ್ದ ಆತನ ಅಪ್ರಾಪ್ತ ಸ್ನೇಹಿತರು ಈ ವಿಚಾರವನ್ನು ಶ್ರೇಯಸ್‌ನ ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ಕುಟುಂಬಸ್ಥರಿಗೆ ಮಾಹಿತಿ ಲಭಿಸಿದ್ದು, ಬಾಲಕನ ತಂದೆ ಶೇಷಪ್ಪ ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಬಾಲಕನ ಪತ್ತೆಗಾಗಿ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.








