Wednesday, September 2, 2026
spot_imgspot_img
spot_imgspot_img

OTP ಕೊಡಲಿಲ್ಲ, ಲಿಂಕ್ ಕ್ಲಿಕ್ ಮಾಡಲಿಲ್ಲ- ಸೈಬರ್ ವಂಚನೆ ಮಾಡದಿದ್ದರೂ ಖಾತೆಯಲ್ಲಿದ್ದ ₹24,758 ಹೋಲ್ಡ್!-ಗ್ರಾಹಕನಿಗೆ ಸಂಕಷ್ಟ-ಏನಿದು ಪ್ರಕರಣ?

- Advertisement -
- Advertisement -

ಪುತ್ತೂರು: ಯಾವುದೇ ಒಟಿಪಿ ಹಂಚಿಕೆ, ಲಿಂಕ್ ಕ್ಲಿಕ್ ಅಥವಾ ಅಪರಿಚಿತ ಹಣ ವರ್ಗಾವಣೆ ಮಾಡದಿದ್ದರೂ ಬ್ಯಾಂಕ್ ಖಾತೆಯಲ್ಲಿದ್ದ ₹24,758.82 ಹಣ ‘ಕೆಪ್ಟ್ ಆನ್ ಹೋಲ್ಡ್’ ಆಗಿರುವ ಘಟನೆ ತಿಂಗಳಾಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ.ತಿಂಗಳಾಡಿ ನಿವಾಸಿ ಕೆ.ಎಂ. ಹನೀಫ್ ರೆಂಜಲಾಡಿ ಅವರ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ₹24,758.82 ಹಣ ಆ.2ರಂದು ಹೋಲ್ಡ್ ಆಗಿರುವ ಕುರಿತು ಮೊಬೈಲ್‌ಗೆ ಸಂದೇಶ ಬಂದಿದೆ. ಬಳಿಕ ಖಾತೆ ಪರಿಶೀಲಿಸಿದಾಗ ಹಣ ಬಳಕೆಗೆ ಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ಮರುದಿನ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದಾಗ, ಚಂಡೀಗಢ ಸೈಬರ್ ಕ್ರೈಂ ಪೊಲೀಸರ ಸೂಚನೆಯ ಮೇರೆಗೆ ಹಣವನ್ನು ಹೋಲ್ಡ್ ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಶಾಖಾ ವ್ಯವಸ್ಥಾಪಕರು ಆ.3ರಂದು ಜಿಆರ್‌ಎಂ ಪೋರ್ಟಲ್ ಮೂಲಕ ಸಂಬಂಧಪಟ್ಟ ಸೈಬರ್ ಕ್ರೈಂ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹನೀಫ್ ತಿಳಿಸಿದ್ದಾರೆ.ಹನೀಫ್ ಅವರ ಪ್ರಕಾರ, ಅವರು ಪುತ್ತೂರಿನ ಅಂಗಡಿಯೊಂದಕ್ಕೆ ತೆಂಗಿನಕಾಯಿ ಮಾರಾಟ ಮಾಡಿದ್ದು, ಅದರಿಂದ ಬಂದ ಸುಮಾರು ₹25 ಸಾವಿರ ಹಣವೇ ಖಾತೆಗೆ ಜಮೆಯಾಗಿತ್ತು.

ಇದೇ ಹಣ ಹೋಲ್ಡ್ ಆಗಿರುವುದರಿಂದ ತೊಂದರೆಗೆ ಸಿಲುಕಿರುವುದಾಗಿ ಅವರು ಹೇಳಿದ್ದಾರೆ.ಸಾಮಾನ್ಯವಾಗಿ ಒಟಿಪಿ ಹಂಚಿಕೆ, ಅನುಮಾನಾಸ್ಪದ ಲಿಂಕ್ ಕ್ಲಿಕ್ ಅಥವಾ ಸೈಬರ್ ವಂಚನೆಯಂತಹ ಪ್ರಕರಣಗಳಲ್ಲಿ ಹಣ ಫ್ರೀಜ್ ಆಗುವುದು ಕಂಡುಬರುತ್ತದೆ. ಆದರೆ ಯಾವುದೇ ವಂಚನೆ ಅಥವಾ ಅನುಮಾನಾಸ್ಪದ ವ್ಯವಹಾರ ಮಾಡದ ವ್ಯಕ್ತಿಯ ಖಾತೆಯ ಹಣವನ್ನು ಏಕಾಏಕಿ ಹೋಲ್ಡ್ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಈ ಕುರಿತು ಹನೀಫ್ ಅವರು ಮಂಗಳೂರು ಸೈಬರ್ ಕ್ರೈಂ ಪೊಲೀಸರು, ಕೆನರಾ ಬ್ಯಾಂಕ್ ಪುತ್ತೂರು ರೀಜನಲ್ ಮ್ಯಾನೇಜರ್ ಹಾಗೂ ಮಂಗಳೂರು ಸರ್ಕಲ್ ಕಚೇರಿಗೂ ದೂರು ನೀಡಿ ವಿಚಾರಿಸಿದ್ದಾರೆ. ಆದರೆ ಚಂಡೀಗಢ ಸೈಬರ್ ಕ್ರೈಂ ಇಲಾಖೆಯಿಂದ ಹಣ ಹೋಲ್ಡ್ ಆಗಿರುವ ಮಾಹಿತಿ ಹೊರತುಪಡಿಸಿ ಹೆಚ್ಚಿನ ವಿವರ ದೊರೆತಿಲ್ಲ ಎಂದು ತಿಳಿಸಿದ್ದಾರೆ.“ಬ್ಯಾಂಕ್‌ನ್ನು ನಂಬಿ ಖಾತೆ ಹೊಂದಿ ವ್ಯವಹಾರ ಮಾಡುತ್ತಿದ್ದೇನೆ. ಯಾವುದೇ ಅಪರಿಚಿತ ವ್ಯಕ್ತಿಗೆ ಹಣ ವರ್ಗಾವಣೆ ಮಾಡಿಲ್ಲ. ಆದರೂ ನನ್ನ ಖಾತೆಯಲ್ಲಿದ್ದ ಹಣವನ್ನು ಹೋಲ್ಡ್ ಮಾಡಲಾಗಿದೆ. ಹಣ ಹೋಲ್ಡ್ ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಬೇಕು. ಸಮಸ್ಯೆಗೆ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕು. ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು. ಅಗತ್ಯವಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ” ಎಂದು ಹನೀಫ್ ಹೇಳಿದ್ದಾರೆ.

ದೂರು ಸ್ವೀಕರಿಸಲಾಗಿದೆ: ಬ್ಯಾಂಕ್ ಮ್ಯಾನೇಜರ್“ಹನೀಫ್ ಅವರ ಖಾತೆಯಲ್ಲಿದ್ದ ₹24,758.82 ಹಣ ಹೋಲ್ಡ್ ಆಗಿರುವುದು ನಿಜ. ಈ ಬಗ್ಗೆ ಅವರು ಬ್ಯಾಂಕ್‌ಗೆ ದೂರು ನೀಡಿದ್ದರು. ಅದರಂತೆ ಆ.3ರಂದು ಸಂಬಂಧಪಟ್ಟ ಚಂಡೀಗಢ ಸೈಬರ್ ಕ್ರೈಂ ಇಲಾಖೆಗೆ ಜಿಆರ್‌ಎಂ ಪೋರ್ಟಲ್ ಮೂಲಕ ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿರುವ ಮಾಹಿತಿ ಬಂದಿದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,” ಎಂದು ತಿಂಗಳಾಡಿ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಯಾವುದೇ ಸೈಬರ್ ವಂಚನೆ ನಡೆಸದೇ ಗ್ರಾಹಕರ ಖಾತೆಯ ಹಣವನ್ನು ಹೋಲ್ಡ್ ಮಾಡಿರುವುದರ ಹಿಂದಿನ ಕಾರಣವೇನು? ಹಣ ಯಾವಾಗ ಬಿಡುಗಡೆಯಾಗಲಿದೆ? ಗ್ರಾಹಕರಿಗೆ ಈ ಕುರಿತು ಸೂಕ್ತ ಮಾಹಿತಿ ನೀಡಲಾಗಿದೆಯೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.

- Advertisement -

Related news

error: Content is protected !!