


ವಿಟ್ಲ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಜಾನುವಾರನ್ನು ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ನ.10ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾದೆಕಲ್ಲು ಎಂಬಲ್ಲಿ ರಾತ್ರಿ ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ವೇಳೆ KA-19-AB-3927 ಸಂಖ್ಯೆಯ ಬೊಲೆರೋ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.
ಈ ವೇಳೆ ವಾಹನದಲ್ಲಿ ಒಂದು ಜಾನುವಾರು ಪತ್ತೆಯಾಗಿದೆ.ವಾಹನದಲ್ಲಿದ್ದ ಬಂಟ್ವಾಳ ಕರೋಪಾಡಿ ನಿವಾಸಿಗಳಾದ ಒ.ಪಿ. ಅಬ್ದುಲ್ಲಾ (45) ಹಾಗೂ ಸುಬ್ರಮಣ್ಯ (55) ಅವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಜಾನುವಾರನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಎಂಬವರ ಸೂಚನೆಯಂತೆ ಜಾನುವಾರನ್ನು ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ.
.
ಈ ಹಿನ್ನೆಲೆಯಲ್ಲಿ ಜಾನುವಾರು ಸಹಿತ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒ.ಪಿ. ಅಬ್ದುಲ್ಲಾ, ಸುಬ್ರಮಣ್ಯ, ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 233/2026, ಕಲಂ 303(2) BNS 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








