
ಮಂಗಳೂರು: ಕೋಮು ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವದ ಕ್ರಮ ಕೈಗೊಂಡಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗುವ ಸೂಕ್ಷ್ಮ ಹಾಗೂ ಕೋಮು ಸಂಬಂಧಿತ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಸಮರ್ಥವಾಗಿ ನಿರ್ವಹಿಸಲು ಹೊಸ ಕಾನೂನು ಅಧಿಕಾರಿಗಳ ಸಮಿತಿಯನ್ನು ಪುನರ್ರಚಿಸಲಾಗಿದೆ.ಈ ಸಂಬಂಧ ರಾಜ್ಯ ಗೃಹ ಇಲಾಖೆಯು ನವೆಂಬರ್ 7ರಂದು ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಈ ಹಿಂದೆ 2025ರ ಜುಲೈ 3ರಂದು ರಚಿಸಲಾಗಿದ್ದ ಸಮಿತಿಯ ಆದೇಶವನ್ನು ಬದಲಿಸಿ ಹೊಸ ಸಮಿತಿಯನ್ನು ನೇಮಕ ಮಾಡಲಾಗಿದೆ.ಹಿಂದಿನ ಸಮಿತಿಯಲ್ಲಿ ನೇಮಕಗೊಂಡಿದ್ದ ಕೆಲವು ಕಾನೂನು ಅಧಿಕಾರಿಗಳು ಅಡ್ವೊಕೇಟ್ ಜನರಲ್ ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಹೈಕೋರ್ಟ್ನಲ್ಲಿ ಪ್ರಕರಣಗಳ ವಿಚಾರಣೆ ಮತ್ತು ಪರಿಣಾಮಕಾರಿ ವಾದ ಮಂಡನೆಗೆ ತೊಂದರೆಯಾಗುತ್ತಿರುವುದಾಗಿ ಅಡ್ವೊಕೇಟ್ ಜನರಲ್ ಕಚೇರಿ ಸರಕಾರದ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಹೊಸ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರಕರಣಗಳ ನಿರ್ವಹಣೆಗೆ ಒಟ್ಟು ಏಳು ಕಾನೂನು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ಗಳಾದ ಎಸ್.ಎ. ಅಹ್ಮದ್ ಮತ್ತು ಶಹುಲ್ಲಾ ಹಮೀದ್, ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕರಾದ ರಶ್ಮಿ ಜಾಧವ್, ಮೊಹಮ್ಮದ್ ಅಯೂಬ್ ಅಲಿ ಮತ್ತು ಸೂರ್ಯ ಮುಕುಂದ್ ರಾಜ್ ಹಾಗೂ ಹೈಕೋರ್ಟ್ ಸರಕಾರಿ ವಕೀಲರಾದ ವಹೀದಾ ಎಂ.ಎಂ. ಮತ್ತು ಮಹೇಶ್ ಪಿ. ಸೇರಿದ್ದಾರೆ.ಇದೇ ಏಳು ಮಂದಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ದಾಖಲಾಗುವ ಸೂಕ್ಷ್ಮ ಹಾಗೂ ಕೋಮು ಸಂಬಂಧಿತ ಪ್ರಕರಣಗಳನ್ನೂ ನಿರ್ವಹಿಸಲಿದ್ದಾರೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಹೈಕೋರ್ಟ್ ಸರಕಾರಿ ವಕೀಲರ ನೆರವು ಪಡೆಯಲು ಕೂಡ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ.








