Wednesday, July 29, 2026
spot_imgspot_img
spot_imgspot_img

MLC ಸ್ಥಾನ ಕೊಡಿಸುವುದಾಗಿ ₹1.5 ಕೋಟಿ ವಂಚನೆ-ಕಾಂಗ್ರೆಸ್ ನಾಯಕರ ಹೆಸರು ಬಳಸಿ ಮಹಿಳೆಗೆ ಮೋಸ, ಲೈಂಗಿಕ ಕಿರುಕುಳ ಆರೋಪ!

- Advertisement -
- Advertisement -

ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, MLC ಸ್ಥಾನ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹1.50 ಕೋಟಿ ಪಡೆದು ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಇದೇ ವೇಳೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವೂ ದಾಖಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ದೂರಿನ ಪ್ರಕಾರ, ಯರ್ರಿಸ್ವಾಮಿ ಎಂಬಾತ ತಾನು ಕಾಂಗ್ರೆಸ್ ನಾಯಕರ ಆಪ್ತ ಹಾಗೂ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡು, ವಿವಿಧ ರಾಜಕೀಯ ಮುಖಂಡರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ. ಬಳಿಕ MLC ಸ್ಥಾನ ಕೊಡಿಸುವುದಾಗಿ ಹೇಳಿ ₹5 ಕೋಟಿ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ ₹1.50 ಕೋಟಿ ಪಡೆದಿದ್ದಾನೆ ಎನ್ನಲಾಗಿದೆ.ಮಹಿಳೆ 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ಹಂತ ಹಂತವಾಗಿ ಹಣ ಪಾವತಿಸಿದ್ದು, ಆರೋಪಿಯ ಸೂಚನೆಯಂತೆ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಹಣ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ನಡುವೆ, ಎಐಸಿಸಿ (AICC) ಹೈಕಮಾಂಡ್ ನಾಯಕರನ್ನು ಭೇಟಿಮಾಡಿಸುವ ನೆಪದಲ್ಲಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದು, ಅಲ್ಲಿ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೂ ಯರ್ರಿಸ್ವಾಮಿ ವಿರುದ್ಧ ಕೇಳಿಬಂದಿದೆ.ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಯರ್ರಿಸ್ವಾಮಿ, ಬಸವರಾಜು ಹಾಗೂ ಸಿದ್ದರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ರಾಜಕೀಯ ಪ್ರಭಾವದ ಹೆಸರಿನಲ್ಲಿ ನಡೆದಿರುವ ಈ ವಂಚನೆಯ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಗಳು ಸದ್ಯ ದೂರಿನ ಆಧಾರಿತವಾಗಿದ್ದು, ತನಿಖೆಯ ನಂತರವೇ ನಿಖರ ಸತ್ಯಾಂಶ ಹೊರಬೀಳಬೇಕಿದೆ.

- Advertisement -

Related news

error: Content is protected !!