ವಿಜಯವಾಡ: ಬಾಗಿಲು ತೆರೆದಿರುವಾಗಲೇ ದಿಢೀರನೆ ಲಿಫ್ಟ್ ಚಾಲನೆಗೊಂಡ ಪರಿಣಾಮ, 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವಿಜಯವಾಡದ ಸೂರ್ಯ ಟವರ್ಸ್ ನಲ್ಲಿ ನಡೆದಿದೆ. ರವಿವಾರ ಈ ಘಟನೆ ನಡೆದಿದ್ದು, ಕಟ್ಟಡದ ಲಿಫ್ಟ್ ಸುರಕ್ಷತೆ ಮತ್ತು ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿವೆ.ಮೃತ ಮಹಿಳೆಯನ್ನು ವನಿತಾ ಎಂದು ಗುರುತಿಸಲಾಗಿದೆ.


ಅವರು ತಮ್ಮ ಪುತ್ರಿ ಹಾಗೂ ಮೊಮ್ಮಗನೊಂದಿಗೆ ಲಿಫ್ಟ್ ಅನ್ನು ಪ್ರವೇಶಿಸಿದ್ದಾರೆ. ಬಳಿಕ, ಲಿಫ್ಟ್ ನಿಂದ ಹೊರ ಬರುವಲ್ಲಿ ಅವರ ಪುತ್ರಿ ಹಾಗೂ ಮೊಮ್ಮಗ ಯಶಸ್ವಿಯಾಗಿದ್ದಾರೆ. ಆದರೆ, ವನಿತಾ ಅವರು ಲಿಫ್ಟ್ ನಿಂದ ಹೊರಗೆ ಕಾಲಿಡಬೇಕು ಎನ್ನುವಾಗಲೇ ಲಿಫ್ಟ್ ದಿಢೀರನೆ ಕೆಳಗೆ ಚಲಿಸಲು ಪ್ರಾರಂಭಿಸಿದೆ. ಆಗ ಲಿಫ್ಟ್ ಬಾಗಿಲು ತೆರೆದೇ ಇತ್ತು ಎನ್ನಲಾಗಿದೆ.ಅಪಾಯದ ಸೂಚನೆ ದೊರೆತಿದ್ದರಿಂದ, ವನಿತಾ ಅವರು ಚಲಿಸುತ್ತಿದ್ದ ಲಿಫ್ಟ್ ನಿಂದ ಆತುರವಾಗಿ ಹೊರಬರಲು ಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಲಿಫ್ಟ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿರುವ ಸೂರ್ಯ ಟವರ್ಸ್ ಸಿಬ್ಬಂದಿಗಳು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಈ ಭಯಾನಕ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಿಫ್ಟ್ ಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗುವ ಅಪಾಯದ ಕುರಿತು ವ್ಯಾಪಕ ಕಳವಳ ವ್ಯಕ್ತವಾಗಿದೆ.









