
ಭೋಪಾಲ: ಸಾಮಾಜಿಕ ಜಾಲತಾಣದ ರೀಲ್‌ವೊಂದರಲ್ಲಿ ಹರಿದಾಡಿದ್ದ ಸುಳ್ಳು ಮಾಹಿತಿಯನ್ನು ನಂಬಿ 16 ವರ್ಷದ ಬಾಲಕನನ್ನು ಹತ್ಯೆ ಮಾಡಿ, ಆತನ ವೃಷಣಗಳನ್ನು ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ.ಪೊಲೀಸರ ಪ್ರಕಾರ, ಬಿಬಿಎ ವಿದ್ಯಾರ್ಥಿ ಜೋಹೆಬ್ ಖಾನ್ (20) ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಿಕೊಂಡು, ಮಾನವ ವೃಷಣವೊಂದಕ್ಕೆ ₹1ರಿಂದ ₹1.5 ಕೋಟಿ ವರೆಗೆ ಬೆಲೆ ಸಿಗುತ್ತದೆ ಎಂದು ನಾಲ್ವರನ್ನು ನಂಬಿಸಿದ್ದ. ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದ ಸುಳ್ಳು ಮಾಹಿತಿಯಿಂದ ಆತ ಪ್ರೇರಿತನಾಗಿದ್ದ ಎನ್ನಲಾಗಿದೆ.

ಆ.6ರಂದು ಇಬ್ಬರು ಅಪ್ರಾಪ್ತ ಬಾಲಕರ ಮೂಲಕ 16 ವರ್ಷದ ಬಾಲಕನನ್ನು ಜಗಳದಲ್ಲಿ ಸಹಾಯ ಮಾಡುವುದಾಗಿ ಹೇಳಿ ಖತ್ತಾಪುರ ಬಳಿಯ ಇಟ್ಬಾಲ್ ಮೈದಾನದಿಂದ ಧೋಬಿ ಘಾಟ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿಗೆ ತಲುಪಿದ ಬಳಿಕ ಗುಂಪು ಬಾಲಕನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಬಳಿಕ ಆತನ ದೇಹದಿಂದ ವೃಷಣಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆಯ ಪ್ರಮುಖ ಆರೋಪಿ ಜೋಹೆಬ್ ಖಾನ್ ಸ್ಥಳದಲ್ಲಿರಲಿಲ್ಲ. ಆದರೆ ವೀಡಿಯೊ ಕರೆ ಮೂಲಕ ಇತರರಿಗೆ ಮಾರ್ಗದರ್ಶನ ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಹತ ಬಾಲಕ ಇಟ್ಬಾಲ್ ಮೈದಾನ ಹಾಗೂ ಮೋತಿ ಮಸೀದಿ ಸುತ್ತಮುತ್ತ ಪೆನ್ ಮತ್ತು ಕೀ-ರಿಂಗ್‌ಗಳನ್ನು ಮಾರಾಟ ಮಾಡುತ್ತಿದ್ದ. ಆ.10ರಂದು ಧೋಬಿ ಘಾಟ್ ಬಳಿಯ ಲೋವರ್ ಲೇಕ್‌ನಲ್ಲಿ ಆತನ ಕೊಳೆತ ಶವ ಪತ್ತೆಯಾಗಿತ್ತು. ತಾಯಿ ನಾಪತ್ತೆ ದೂರು ನೀಡಿದ ಐದು ದಿನಗಳ ಬಳಿಕ ದೇಹದ ಮೇಲಿದ್ದ ಹಚ್ಚೆಯ ಆಧಾರದಲ್ಲಿ ಬಾಲಕನ ಗುರುತು ಪತ್ತೆಯಾಯಿತು.ವೃಷಣಗಳನ್ನು ಮಾರಾಟ ಮಾಡಿ ಹಣ ಗಳಿಸಲು ಯತ್ನಿಸಿದ ಆರೋಪಿಗಳು ಖರೀದಿದಾರರಿಗಾಗಿ ಎರಡು ದಿನಗಳ ಕಾಲ ದೇಹದ ಭಾಗಗಳನ್ನು ಟೆರೇಸ್‌ನಲ್ಲಿ ಇರಿಸಿದ್ದರು.
ಆದರೆ ಯಾವುದೇ ಖರೀದಿದಾರರು ಸಿಗದ ಹಿನ್ನೆಲೆಯಲ್ಲಿ ಅವುಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದೂ ಅವರಿಗೆ ತಿಳಿದಿರಲಿಲ್ಲ.ನಂತರ ಜೋಹೆಬ್ ಸೂಚನೆಯಂತೆ ದೇಹದ ಭಾಗಗಳನ್ನು ಪ್ರತ್ಯೇಕ ಜಲಮೂಲಗಳಲ್ಲಿ ಎಸೆಯಲಾಗಿದೆ. ವೃಷಣಗಳನ್ನು ಅಪ್ಪರ್ ಲೇಕ್ ಮತ್ತು ಲೋವರ್ ಲೇಕ್‌ನಲ್ಲಿ ಎಸೆಯಲಾಗಿದೆ ಎಂದು ಶಂಕಿತರು ಪೊಲೀಸರಿಗೆ ತಿಳಿಸಿದ್ದಾರೆ.
ವೃಷಣಗಳನ್ನು ಎಸೆದಿರುವ ಸ್ಥಳಗಳನ್ನು ಪತ್ತೆಹಚ್ಚಲು ಪೊಲೀಸರು ಶಂಕಿತರನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ಎರಡು ಕೆರೆಗಳಲ್ಲಿ ಮುಳುಗುತಜ್ಞರ ನೆರವಿನಿಂದ ಶೋಧ ಕಾರ್ಯ ನಡೆಸಲು ಮುಂದಾಗಿದ್ದಾರೆ.








