


ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಆಝಾನ್ ಖಾನ್ ಗೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಈ ಹಿನ್ನಲೆಯಲ್ಲಿ ಬುಧವಾರ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಒಂದು ಗಂಟೆ ಜವಾಬ್ದಾರಿ ನಿಭಾಯಿಸಿದ್ದಾನೆ. ಈ ವಿಶೇಷ ಸಂದರ್ಭಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಾಕ್ಷಿಯಾಯಿತು. ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ ತಬ್ರೇಝ್ ಖಾನ್ ಅವರ ಪುತ್ರ ಆಝಾನ್ ಖಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕ.

ಆಝಾನ್ ಖಾನ್ ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಅನ್ನುವುದು ಆತನ ಆಸೆಯಾಗಿತ್ತಂತೆ. ಇದೇ ಕಾರಣಕ್ಕೆ ಪೋಷಕರು ಮಗನ ಆಸೆ ಈಡೇರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೊಲೀಸ್ ಇಲಾಖೆ ವತಿಯಿಂದ ಆಝಾನ್ ಖಾನ್ನನ್ನು ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಆಗಿ ನಿಯೋಜಿಸಲಾಗಿತ್ತು.
ಬಾಲಕನ ಆಸೆ ಈಡೇರಿಸಲು ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಪೊಲೀಸ್ ಜೀಪಿನಲ್ಲಿಯೇ ಆಝಾನ್ ಖಾನ್ನನ್ನು ಠಾಣೆಗೆ ಕರೆತರಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ ಭೂಮರೆಡ್ಡಿ ಇನ್ಸ್ಪೆಕ್ಟರ್ ಆಜಾನ್ ಖಾನ್ನನ್ನು ಸ್ವಾಗತಿಸಿದರು. ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ಅಜಾನ್ ಖಾನ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ.
ಅಧಿಕಾರ ಸ್ವೀಕರಿಸುತ್ತಿದ್ದಂತೆ ಇನ್ಸ್ಪೆಕ್ಟರ್ ಆಝಾನ್ ಖಾನ್, ಸಿಬ್ಬಂದಿಗಳನ್ನು ಕರೆದು ಎಲ್ಲರು ಚೆನ್ನಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ ಸಿಬ್ಬಂದಿಯೊಬ್ಬರು ರಜೆ ಬೇಕು ಎಂದು ಮನವಿ ಮಾಡಿದರು. ಕಾರಣ ಕೇಳಿದ ಆಝಾನ್ ಖಾನ್, ರಜೆಗೆ ಅನುಮತಿ ನೀಡಿದ. ಇನ್ನು ಇದೇ ವೇಳೆ ಪೊಲೀಸರು ಕಳ್ಳನನ್ನು ಹಿಡಿದು ತಂದು ನಿಲ್ಲಿಸಿದಾಗ, ಇನ್ನುಂದೆ ಕಳ್ಳತನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ.
ಸಂಜೆ 6.30ರಿಂದ ಒಂದು ಗಂಟೆ ಕಾಲ ಆಝಾನ್ ಖಾನ್ ದೊಡ್ಡಪೇಟೆ ಠಾನೆ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿಭಾಯಿಸಿದ. ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಕ್ಕೆ ಬಾಲಕ ಖುಷಿ ಪಟ್ಟ ಬಾಲಕನ ಆಸೆ ಈಡೇರಿಸಿದ ಪೊಲೀಸರು ಖುಷಿಪಟ್ಟರು.








