


ಭಾರತೀಯ ಮೂಲದ ಅಮೆರಿಕದ ಉದ್ಯಮಿ, ಔಟ್‌ಕಮ್ ಹೆಲ್ತ್ ಸಂಸ್ಥೆಯ ಸಹ ಸಂಸ್ಥಾಪಕ ರಿಷಿ ಶಾ ಅವರು ಬರೋಬ್ಬರಿ 8,300 ಕೋಟಿ ರೂ. ವಂಚನೆ ಮಾಡಿದ್ದಾರೆ. ಇದೀಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಿ ಶಾ ಅವರಿಗೆ ಅಮೆರಿಕ ಜಿಲ್ಲಾ ಕೋರ್ಟ್ ಏಳೂವರೆ ವರ್ಷ ಶಿಕ್ಷೆ ವಿಧಿಸಿದೆ.
ಗೋಲ್ಡ್ ಮನ್ ಸ್ಯಾಚಸ್, ಗೂಗಲ್ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್, ಇಲಿಯನ್ಸ್ ಗವರ್ನರ್ ಸೇರಿದಂತೆ ಬೃಹತ್ ಕಂಪನಿಗಳ ಹೂಡಿಕೆದಾರರೇ ಈ ಬೃಹತ್ ವಂಚನೆ ಯೋಜನೆಗೆ ಬಲಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಕಾರ್ಪರೇಟ್ ವಂಚನೆ ಪ್ರಕರಣ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ತೀರ್ಪಿನ ವೇಳೆ ಅಭಿಪ್ರಾಯಪಟ್ಟಿದ್ದಾರೆ.
2010ರ ವೇಳೆ ಅಮೆರಿಕದಲ್ಲಿ ವೈದ್ಯಲೋಕದ ಬೃಹತ್ ಕಂಪನಿಯಾಗಿ ಬೆಳೆದು ನಿಂತ ಔಟ್ ಕಮ್, ಆಸ್ಪತ್ರೆ, ವೈದ್ಯರು ಮತ್ತು ರೋಗಿಗಳ ಮೂಲಕವೂ ಹಣ ಸಂಗ್ರಹಿಸಲು ಆರಂಭಿಸಿತು. ಅಲ್ಲದೇ ಅತಿಯಾದ ಜಾಹಿರಾತು ಮತ್ತು ಅನಗತ್ಯ ಜಾಹಿರಾತುಗಳ ಮೂಲಕ ಕುಸಿತ ಕಾಣಲು ಆರಂಭಿಸಿತು.
ನಂತರ ಹಣದ ವಹಿವಾಟಿಗಾಗಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆ ಮೂಲಕ ವಂಚನೆಗೆ ಇಳಿದ ಕಂಪನಿ ಸಹಸ್ರಾರು ರೋಗಿಗಳು, ಕಂಪನಿಗಳಿಗೆ ವಂಚಿಸಿತು ಎಂದು ಹೇಳಲಾಗಿದೆ.
ಇನ್ನು ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ರಿಷಿ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಕೂಡ ಮಾಡಿದ್ದರು. ಆದರೆ ಕೋರ್ಟ್ ಏಳೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.








