



ಹಳೇಬೀಡು: ಜೈನರಗುತ್ತಿಯಲ್ಲಿ ಪ್ರತಿಷ್ಠಾಪನೆ ಆಗಿರುವ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರ ಹಾಗೂ 24ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಮೂರ್ತಿಗೆ ಅಡಗೂರು, ದೇವಿಹಳ್ಳಿ, ಹೊಲಬಗೆರೆ ಜೈನ ಸಮುದಾಯದವರಿಂದ ಭಾನುವಾರ ಜೈನಮುನಿ ವೀರಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಮಸ್ತಕಾಭಿಷೇಕ ನೆರವೇರಿತು.ಜಿನ ಮಂದಿರದಲ್ಲಿ ನಿತ್ಯ ಪೂಜಾ ವಿಧಾನ ನೆರವೇರಿಸಿದ ನಂತರ, ತೀರ್ಥಂಕರ ಮೂರ್ತಿಗಳಿಗೆ ಮಸ್ತಕಾಭಿಷೇಕ ಮಾಡಲಾಯಿತು. ಎರಡೂ ಮೂರ್ತಿಗಳಿಗೆ ಶುದ್ಧ ಜಲದ 108 ಕಳಸಗಳಿಂದ ಅಭಿಷೇಕ ನೆರವೇರಿತು. ಎಳನೀರು, ಕ್ಷೀರ (ಹಾಲು), ಸರ್ವೌಷದ (ಕಷಾಯ), ಇಕ್ಷುರಸ (ಕಬ್ಬಿನ ಹಾಲು), ಶ್ರೀಗಂಧ, ಅರಿಸಿನ, ಚಂದನಗಳಿಂದ ಅಭಿಷೇಕ ನೆರವೇರಿತು.ಮಹಾಶಾಂತಿ ಮಂತ್ರದೊಂದಿಗೆ ಶಾಂತಿಧಾರೆ ನೆರವೇರಿಸಲಾಯಿತು. ಶಾಂತಿಧಾರೆಯ ನಂತರ ಶ್ವೇತ ವಸ್ತ್ರಧಾರಿಗಳಾಗಿ ನೆರೆದಿದ್ದ ಶ್ರಾವಕ, ಶ್ರಾವಕಿಯರು ಜಿನ ಗಾಯನಕ್ಕೆ ಭಕ್ತಿಭಾವದಿಂದ ಹೆಜ್ಜೆ ಹಾಕಿದರು. ಎರಡೂ ಮೂರ್ತಿಗಳಿಗೂ ಮಹಾಮಂಗಳಾರತಿ ನೆರವೇರಿತು.ತೀರ್ಥಂಕರ ಮೂರ್ತಿಗಳ ದರ್ಶನ ಮಾಡಿದ ಶ್ರಾವಕ, ಶ್ರಾವಕಿಯರು ಜಿನ ಧರ್ಮ ಪ್ರಭಾವಕ ವೀರಸಾಗರ ಮುನಿ ಮಹಾರಾಜರ ಆಶೀರ್ವಾದ ಪಡೆದರು. ಪ್ರಮುಖರಾದ ಎ.ಬಿ.ಕಾಂತರಾಜು, ಜಿನಚಂದ್ರ, ನಾಗೇಂದ್ರ ಕುಮಾರ್, ಶಶಿಕುಮಾರ್, ಮನ್ಮಥರಾಜು, ನಾಗಚಂದ್ರ, ರಾಜೇಂದ್ರ ಕುಮಾರ್, ಬ್ರಹ್ಮೇಶ್, ಭರತರಾಜು ಪಾಲ್ಗೊಂಡಿದ್ದರು.ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಭಾನುವಾರ ಮುನಿಸುವ್ರತ ಹಾಗೂ ಶೀತಲನಾಥ ತೀರ್ಥಂಕರರಿಗೆ ಮಸ್ತಕಾಭಿಷೇಕ ನೆರವೇರಿಸಿದ್ದರಿಂದ ಶ್ರಾವಕರಿಂದ ಮಹಾಮಂಗಳಾರತಿ ನೆರವೇರಿತು.