

ಬಜ್ಪೆ: ಮೂಡುಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಟೆಂಪೋದಲ್ಲಿ ಮಾ.28ರಂದು ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಸೂರಲ್ಪಾಡಿಯಲ್ಲಿ ಬಜಪೆ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದುಗನಬೆಟ್ಟು ಹೌಸಿನ ಮೊಹಮ್ಮದ್ ತೌಸೀಫ್ (26), 62ನೇ ತೋಕೂರು ಗ್ರಾಮದ ನಡುಮನೆಯ ಆರಾಫತ್ ಅಲಿ (36), ಶಾಂತಿಗುಡ್ಡೆ ಹೌಸ್‌ನ ಮೊಹಮ್ಮದ್ ಅಫ್ರಿದ್ ಯಾನೆ ಅಪ್ಪಿ (27), ಮೂಡುಬಿದಿರೆ ಕೋಟೆಬಾಗಿಲಿನ ಅಬ್ದುಲ್ ನಜೀರ್ (31) ಹಾಗೂ ಬೆಳ್ತಂಗಡಿ ತಾಲೂಕಿನ ಕಾಶೀಪಟ್ಟ ಪೆರಂತಡ್ಕ ಫಾರೀಸ್ ಸಲ್ಮಾನ (26) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾರ್ಚ್ 28ರಂದು ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಮಸೀದಿ ಮುಂಭಾಗದಲ್ಲಿ ಅಡ್ಡಹಾಕಿದ್ದರು. ಈ ವೇಳೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದರು. ಘಟನೆಯಲ್ಲಿ 19 ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದರು. ಗೋವಿನ ಕೈಕಾಲುಗಳನ್ನು ಮೇಲಕ್ಕೆ ನೇತಾಡಿಸಿದ ಕಟ್ಟಿದ್ದು, ಕಿರಿದಾದ ಜಾಗದಲ್ಲಿ ಕಟ್ಟಿಕೊಂಡು ಬರುತ್ತಿದ್ದಾಗಲೇ ತಡೆದು ನಿಲ್ಲಿಸಲಾಗಿತ್ತು.