


ಬೆಂಗಳೂರು: ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತು ಎಂದು ಅಮಾನತಾಗಿರುವ ಐಪಿಎಸ್ ಅಧಿಕಾರಿ ದಯಾನಂದ್ ತಿಳಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ವಿಚಾರಣೆಯ ಪ್ರಮುಖ ಭಾಗವಾದ ದಯಾನಂದ್ ಅವರ ಹೇಳಿಕೆಯನ್ನು ದಾಖಲು ಮಾಡಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಗುರುವಾರ ವಿಚಾರಣೆಗೆ ಹಾಜರಾದ ದಯಾನಂದ್ ಅಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನ 21 ಗೇಟ್ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ಸಂಪೂರ್ಣವಾಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.ಪ್ರತಿ ಬಾರಿ ಐಪಿಎಲ್ ಮ್ಯಾಚ್ ನಡೆಯುವಾಗ ಇರುವಷ್ಟು ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೆ ಅಂದು ಗೇಟ್ ತೆಗೆಯಲು ತಡಮಾಡಿದ್ದರು. ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಹೇಳಿಕೆ ದಾಖಲಿಸಿದ್ದಾರೆ.
ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಸಾವಿನ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಇಂದು ಇಡೀ ದಿನ ಓಪನ್ ಡೇ ವಿಚಾರಣೆ ನಡೆಯಲಿದ್ದು ತನಿಖೆ ಕೊನೆಯ ಭಾಗವಾಗಿ ಸಾರ್ವಜನಿಕರು ಭಾಗಿಯಾಗಲಿದ್ದಾರೆ.
ಕಾಲ್ತುಳಿತ ಸಂಬಂಧ ಈವರೆಗೆ 140 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದ್ದು ಮುಂದಿನ ವಾರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳು
1) ಪೊಲೀಸ್ ಠಾಣೆಯಲ್ಲಿ ಅನುಮತಿಗಿಂತ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
2) ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದವರ ವೈಫಲ್ಯ
3) ಬ್ಯಾರಿಕೇಡ್, ಗೇಟ್ಗಳಲ್ಲಿ ಸರಿಯಾದ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡದೇ ಇರುವುದು
4) ಅಂತಿಮ ಘಟ್ಟದಲ್ಲಿ ಉಚಿತ ಪ್ರವೇಶದ ಬಗ್ಗೆ ಘೋಷಣೆ